ಮೊದಲ ಹೆಸರು ಸಿದ್ದಾರ್ಥ. ಪ್ರಜಾಪತಿದೇವಿ ಸಾಕಿದ್ದರಿಂದ ಪ್ರಜಾಪತಿ ಗೌತಮನೆಂದೂ, ಜ್ಞಾನ ಸಂಪಾದನೆಯಾದ ಮೇಲೆ ಬುದ್ಧನೆಂದು ಕರೆಯಲಾಗಿದೆ. ಬೌದ್ಧಧರ್ಮದಲ್ಲಿ ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದವನನ್ನು ಬುದ್ಧನೆಂದು ಕರೆಯುತ್ತಾರೆ. ಗೌತಮ ಬುದ್ಧನೆಂಬ ಹೆಸರು ಜನಜನಿತವಾಗಿದೆ.
ಸಿದ್ದಾರ್ಥ ಜನಿಸಿದಾಗಲೇ ಅವನಲ್ಲಿ ಅಪೂರ್ವವಾದ ಮಾಹಾಪುರುಷನ ಲಕ್ಷಣ ಇರುವುದನ್ನು ದೈವಜ್ಞರು ಅರಿತಿದ್ದರು. ಸಿದ್ದಾರ್ಥನಿಗೆ ೩೨ ಚಿನ್ಹೆಗಳಿದ್ದು, ನೀಳಬಾಹು, ವಿಶಾಲವಾದ ಎದೆ, ಊರ್ಧ್ವಮುಖ ರೋಮಧಾರೆ, ದೇಹವನ್ನು ಬಾಗಿಸದೆ ಮಂಡಿ ಮುಟ್ಟುವಷ್ಟು ನೀಳವಾದ ಕೈಗಳು, ಉದ್ದವಾದ ಬೆರಳುಗಳು, ಅತೀ ಮೃದುವಾದ ಹಸ್ತ ಮತ್ತು ನವಿರಾದ ಪಾದಗಳನ್ನು ಹೊಂದಿದ್ದನೆಂದು ವಿಭೂತಿ ಪುರುಷರಲ್ಲಿ ಇರಬೇಕಾದ ಸರ್ವಲಕ್ಷಣಗಳನ್ನು ದಿಗ್ಗನಿಕಾಯ ಎಂಬ ಬೌದ್ಧಗ್ರಂಥ ತಿಳಿಸುತ್ತದೆ.
ಪುತ್ರೋತ್ಸವಕ್ಕೆ ಮುನ್ನ ಮಾಯಾದೇವಿ ಕನಸೊಂದನ್ನು ಕಂಡಳು. ಅದರಲ್ಲಿ ದೇವತೆಗಳು ಮಾಯಾದೇವಿಯನ್ನು ಹಿಮಾಲಯದ ಮೇಲಕ್ಕೆ ಕರೆದುಕೊಂಡು ಹೋಗಿ ಮಹಾಸರೋವರದಲ್ಲಿ ಸ್ನಾನ ಮಾಡಿಸಿ, ಬೆಳ್ಳಿ ಬೆಟ್ಟದ ಮೇಲಿದ್ದ ಬಂಗಾರದ ತೊಟ್ಟಿಲಿನಲ್ಲಿ ಅವಳನ್ನು ಮಲಗಿಸಿದರು. ಆಗ ಬಿಳಿಯ ಆನೆಯೊಂದು ತನ್ನ ಸೊಂಡಿಲಿನಿಂದ ಕಮಲ ಪುಷ್ಪವನ್ನು ಹಿಡಿದು, ಉತ್ತರ ದಿಕ್ಕಿನಿಂದ ಬಂದು ಮಾಯಾದೇವಿಯ ಬಲಪಾರ್ಶ್ವದಿಂದ ಉದರವನ್ನು ಪ್ರವೇಶಿಸಿತಂತೆ.
ಸ್ವಪ್ನದ ಸಂಕೇತವನ್ನು ಕುರಿತು ಜ್ಯೋತಿಷ್ಕರು ಮಾಯಾದೇವಿ ಗಂಡು ಮಗುವಿಗೆ ಜನ್ಮವೀಯುವಳು. ಶಿಶುವು ರಾಜ್ಯಾಭಿಷಕ್ತನಾದರೆ ಚಕ್ರಾಧೀಶ್ವರನೂ, ಸಂಪದ್ಫರಿತನೂ ಆಗುವನು, ರಾಜ್ಯಕೋಶಗಳ ಅಧಿಕಾರ ತೊರೆದು ಯೋಗಿಯಾದರೇ, ಮಹಾಯೋಗಿಯೆನಿಸಿ ಜಗದ್ವಿಖ್ಯಾತ ವ್ಯಕ್ತಿಯಾಗುವನು ಎಂದು ತಿಳಿಸಿದರು.
ರಾಜ ಶುದ್ಧೋಧನನು ಚಕ್ರವರ್ತಿಯಾಗುವ ಲಕ್ಷಣಗಳಿವೆಯೆಂದು, ಬಹಳ ವಾತ್ಸಲ್ಯದಿಂದ ಸಿದ್ದಾರ್ಥನ ಶಿಕ್ಷಣದ ಬೆಳವಣಿಗೆಯಲ್ಲಿ ಹೆಚ್ಚುಆಸಕ್ತಿ ವಹಿಸಿದನು. ಸಿದ್ದಾರ್ಥನು ಸರ್ವ ವಿದ್ಯಾಪಾರಂಗತನಾಗುವಂತೆ, ಕುಲಗುರುವಿನಲ್ಲಿ ವಿದ್ಯೆ ಕೊಡಿಸಿ ತೃಪ್ತನಾಗದೆ, ರಾಮ, ಧಜ, ಲಕ್ಖಣ, ಮಂತಿಯಣ್ಣ, ಸುಯಾಮ, ಸುಭೋಗ, ಸುದತ್ತ, ಸುಮಿತ್ರ, ಸುಲಭ ಮುಂತಾದ ವಿವಿಧ ವಿದ್ಯಾಪಾರಂಗತರಾದ ವಿದ್ವಾಂಸರಲ್ಲಿ ಶಿಕ್ಷಣ ಕೊಡಿಸಿದನು. ಸಿದ್ದಾರ್ಥನು ಬುದ್ಧಿ ಬೆಳವಣಿಗೆಗೆ ಕೊಟ್ಟ ಪ್ರಾಧಾನ್ಯತೆಯನ್ನು ಹೃದಯ ವೈಶಾಲ್ಯತೆಗೂ ಕೊಟ್ಟಿದ್ದನು.
ಸಿದ್ಧಾರ್ಥನಿಗೆ ಅವನ ರಾಣಿಯರ ಸಂಗದಿಂದ ಅವನ ಜ್ಞಾನದ ಮಟ್ಟದಲ್ಲಿ ಹೊಸಹೊಸ ಅನುಭವಗಳನ್ನು ತಂದುಕೊಡುತ್ತಿದ್ದವು. ಪತ್ನಿಯರ ಮನನೋಯದಂತೆ ವರ್ತಿಸುತ್ತಿದ್ದನು. ಹೀಗಿರುವಾಗ ಯಶೋಧರೆ ಗಂಡು ಮಗುವಿನ ತಾಯಿಯಾದಳು. ಪುತ್ರನಿಗೆ ಸಿದ್ಧಾರ್ಥನೇ 'ರಾಹುಲ'ನೆಂದು ನಾಮಕರಣ ಮಾಡಿದನು. ರಾಜ ಶುದ್ಧೋಧನ ಪುತ್ರೋತ್ಸವ ಸಮಾರಂಭವನ್ನು ಅತ್ಯಂತ ವೈಭವದೊಡನೆ ನೆರವೇರಿಸಿದನು. ಬಡಬಗ್ಗರಿಗೆ ಅಪಾರ ದಾನ ಧರ್ಮ ಮಾಡಿದನು.
ಒಮ್ಮೆ ಸಿದ್ದಾರ್ಥ ಪೂರ್ವ ಸೂಚನೆಯನ್ನೂ ಕೊಡದೆ ತನ್ನ ಸಾರಥಿ ಚೆನ್ನನೊಂದಿಗೆ ನಗರ ಸಂಚಾರಕ್ಕೆ ಹೊರಟು ಹಾದಿಯಲ್ಲಿ ಮುದುಕನನ್ನು, ರೋಗಿಯನ್ನು ಮತ್ತು ಒಂದು ಸಾವನ್ನು ಕಂಡು ವ್ಯಾಕುಲಗೊಳ್ಳುತ್ತಾನೆ. ಖಿನ್ನ ಮನಸ್ಕನಾಗಿ, ದುಃಖದಿಂದ ಕಂಗೆಟ್ಟು ಮನದಲ್ಲಿ ವಿರಕ್ತಿ ಹೊಂದುತ್ತಾನೆ. ಚಿಂತಾಕ್ರಾಂತನಾಗಿ ಕುಳಿತು ಆಲೋಚಿಸುವಾಗ ಅವನ ಮುಂದೆ ಸನ್ಯಾಸಿಯೊಬ್ಬ ಬರುತ್ತಾನೆ.
- ಅದುವರೆವಿಗೂ ಅಂತಹವನನ್ನು ಕಾಣದಿದ್ದ ಸಿದ್ದಾರ್ಥ ಆ ಸನ್ಯಾಸಿಯನ್ನು ಪ್ರಶ್ನಿಸಿದಾಗ ಅವನು- "ಜನನ-ಮರಣಗಳುಳ್ಳ ಪ್ರಪಂಚದಲ್ಲಿರುವ ಮಾನವನೂ ತಿಳಿದೂ ತಿಳಿದೂ ಕ್ಷಣಿಕ ಸುಖಕ್ಕಾಗಿ ಆಸೆ ಪಟ್ಟು, ಸಾಗರದಷ್ಟು ದುಃಖ ಪಡುತ್ತಿರುವುದನ್ನು ನೋಡಿ ಖೇದಗೊಂಡು ಕಾಡುಮೇಡು ಅಲೆಯುತ್ತಾ ನೆಮ್ಮದಿಯಾಗಿದ್ದೇನೆ. ನಾನು ಬಂಧು-ಬಾಂಧವರು, ಸುಖ-ಸಂಪತ್ತುಗಳೆಂಬ ಕೋಟಲೆಯಿಂದ ದೂರವಾದವನು. ನನಗೆ ಕಷ್ಟ ಬರುವುದೆಂಬ ಭಯವಿಲ್ಲ. ಸುಖ ಬೇಕೆಂಬ ಆಸೆಯಿಲ್ಲ. ಉರಿಬರಲಿ, ಸಿರಿಬರಲಿ, ಬೇಕು - ಬೇಡ ಎಂಬ ಗೊಂದಲಕ್ಕೆ ಒಳಗಾಗದವನು. ಆತ್ಮ ಸ್ವತಂತ್ರನು ನಾನು. ಭೂಮಿಯೇ ನನ್ನ ಮನೆ, ಆಕಾಶವೇ ನನಗೆ ಹೊದಿಕೆ. ಅನ್ಯರ ಹಂಗಿಲ್ಲದ ಈ ಅರಣ್ಯ ನನ್ನ ವಿಹಾರ ತಾಣ" ಎನ್ನುತ್ತಾನೆ. ಆ ಸನ್ಯಾಸಿಯ ಮಾತು ಸಿದ್ದಾರ್ಥನ ಮನವನ್ನು ಸೂರೆಗೊಂಡವು. ಅವನ ಮನಸ್ಸು ಒಮ್ಮೆಲೆ ಶಾಂತವಾಗಿ ಒಂದು ಡೃಢ ನಿರ್ಧಾರಕ್ಕೆ ಬಂದಿತು.
No comments:
Post a Comment