ಕಾರ್ಮಿಕರ ದಿನಾಚರಣೆ
ಮೇ 1
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.
ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.
1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ.
ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು.
ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ದಿನವನ್ನು ಮೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡಗಳಲ್ಲಿ ಅಂದು ಈ ದಿನವನ್ನಾಚರಿಸುವುದಿಲ್ಲ. ಇಟಲಿಯಲ್ಲಿ ಮೇ ದಿನಾಚರಣೆಯನ್ನು ನಿಷೇಧಿಸಲಾಗಿತ್ತಲ್ಲದೆ, ಅದರ ಬದಲು ರೋಮಿನ ಸ್ಥಾಪನೆಯ ದಿನವನ್ನಾಚರಿಸುವ ಏರ್ಪಾಡು ಮಾಡಲಾಗಿತ್ತು. ಸೋವಿಯತ್ ದೇಶದಲ್ಲಿ ಮೇ 1 ಸಾರ್ವಜನಿಕ ರಜಾ ದಿನ. 1890ರ ದಶಕದಿಂದ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಮೇ ತಿಂಗಳ 1ರಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತಿದೆ. ಅಂದು ಸಾಮಾನ್ಯವಾಗಿ ಕಾರ್ಮಿಕ ರಜಾದಿನ, ಸೋವಿಯತ್ ದೇಶವೇ ಮುಂತಾದ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಈ ದಿನಾಚರಣೆ ವಿಶಿಷ್ಟವಾದ್ದು. ಮಾಸ್ಕೋದಲ್ಲಿ ನಡೆಯುವ ಮೇ ದಿನದ ಉತ್ಸವ-ಕವಾಯಿತು ವಿಶ್ವವಿಖ್ಯಾತವಾದ್ದು. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಮೇ ದಿನದ ಅನಂತರದ ಪ್ರಥಮ ಭಾನುವಾರದಂದು ಆಚರಿಸುವುದು ಸಾಮಾನ್ಯ. ಲಂಡನಿನಲ್ಲಿ ಹೈಡ್ ಪಾರ್ಕಿನಲ್ಲಿ ಉತ್ಸವಸಭೆ ಸೇರುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಪ್ರಥಮ ಬಾರಿಗೆ ಆಚರಿಸಿದ್ದು 1892ರಲ್ಲಿ.
ಪ್ರಪಂಚದ ಹಲವೆಡೆ ಮೇ ೧ರಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ
- ಅಲ್ಬೇನಿಯ,
- ಅರ್ಜೆಂಟೀನಾ,
- ಅರೂಬ,
- ಆಸ್ಟ್ರಿಯ,
- ಬಾಂಗ್ಲಾದೇಶ,
- ಬೆಲಾರುಸ್,
- ಬೆಲ್ಜಿಯಂ,
- ಬೊಲಿವಿಯ,
- ಬೋಸ್ನಿಯ ಮತ್ತು ಹೆರ್ಝೆಗೋವಿನ,
- ಬ್ರೆಜಿಲ್,
- ಬಲ್ಗೇರಿಯ,
- ಕ್ಯಾಮರೂನ್,
- ಚಿಲಿ,
- ಕೊಲಂಬಿಯ,
- ಕೋಸ್ಟ ರಿಕ,
- ಚೀನ,
- ಕ್ರೊಯೇಷಿಯ,
- ಕ್ಯೂಬ,
- ಸಿಪ್ರಸ್,
- ಚೆಕ್ ಗಣರಾಜ್ಯ,
- ಡೆನ್ಮಾರ್ಕ್,
- ಡೊಮಿನಿಕ ಗಣರಾಜ್ಯ,
- ಈಕ್ವೆಡಾರ್,
- ಈಜಿಪ್ಟ್,
- ಫಿನ್ಲ್ಯಾಂಡ್,
- ಫ್ರಾನ್ಸ್,
- ಜರ್ಮನಿ,
- ಗ್ರೀಸ್,
- ಗ್ವಾಟೆಮಾಲ,
- ಹೈತಿ,
- ಹೊಂಡುರಾಸ್,
- ಹಾಂಗ್ ಕಾಂಗ್,
- ಹಂಗರಿ,
- ಐಸ್ಲೆಂಡ್,
- ಭಾರತ,
- ಇಂಡೋನೇಷ್ಯ,
- ಇಟಲಿ,
- ಜೋರ್ಡನ್,
- ಕೀನ್ಯ,
- ಲ್ಯಾಟ್ವಿಯ,
- ಲಿಥುವೇನಿಯ,
- ಲೆಬನಾನ್,
- ಮೆಸಿಡೋನಿಯ,
- ಮಲೇಶಿಯ,
- ಮಾಲ್ಟ,
- ಮಾರಿಷಸ್,
- ಮೆಕ್ಸಿಕೋ,
- ಮೊರಾಕೊ,
- ಮಯನ್ಮಾರ್,
- ನೈಜೀರಿಯ,
- ಉತ್ತರ ಕೊರಿಯ,
- ನಾರ್ವೆ,
- ಪಾಕಿಸ್ತಾನ,
- ಪೆರಗ್ವೆ,
- ಪೆರು,
- ಪೋಲೆಂಡ್,
- ಫಿಲಿಫೀನ್ಸ್
- ಪೋರ್ಚುಗಲ್,
- ರೊಮೇನಿಯ,
- ರಷ್ಯ,
- ಸಿಂಗಾಪುರ,
- ಸ್ಲೊವಾಕಿಯ,
- ಸ್ಲೊವೇನಿಯ,
- ದಕ್ಷಿಣ ಕೊರಿಯ,
- ದಕ್ಷಿಣ ಆಫ್ರಿಕ,
- ಸ್ಪೇನ್,
- ಶ್ರೀ ಲಂಕ,
- ಸರ್ಬಿಯ,
- ಸ್ವೀಡನ್,
- ಸಿರಿಯ,
- ಥೈಲ್ಯಾಂಡ್,
- ಟರ್ಕಿ,
- ಉಕ್ರೇನ್,
- ಉರುಗ್ವೆ,
- ವೆನಿಜುವೆಲಾ,
- ವಿಯೆಟ್ನಾಂ,
- ಜಾಂಬಿಯ,
- ಜಿಂಬಾಬ್ವೆ.
ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು.
- ಭಾರತದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಆಚರಿಸಲಾಗುತ್ತದೆ.
ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಸೆಪ್ಟೆಂಬರ್ ಮೊದಲನೆಯ ಸೋಮವಾರದಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತದೆ. ಆ ದಿನವನ್ನಾಚರಿಸಬೇಕೆಂಬ ಚಳವಳಿಯನ್ನು ಅಲ್ಲಿ ಪ್ರಾರಂಭಿಸಿದವರು ನೈಟ್ಸ್ ಆಫ್ ಲೇಬರ್ ಎಂಬ ಕಾರ್ಮಿಕ ಸಂಘಗಳವರು. 1882, 1883 ಮತ್ತು 1884ರಲ್ಲಿ ಅವರು ಕಾರ್ಮಿಕ ದಿನದಂದು ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನ ನಡೆಸಿದರು. ಕಾರ್ಮಿಕ ದಿನದ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ, 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು. ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು ಅಮೆರಿಕಾದಲ್ಲಿ, ಪ್ರತಿವರ್ಷದ ಸೆಪ್ಟೆಂಬರ್ ಮೊದಲನೆಯ ಸೋಮವಾರವನ್ನು ಕಾರ್ಮಿಕ ದಿನವೆಂದು ಪರಿಗಣಿಸಬೇಕೆಂದೂ ಅಂದು ರಜಾ ಘೋಷಿಸಬೇಕೆಂದೂ ಅವರು 1884ರಲ್ಲಿ ನಿರ್ಣಯ ಮಾಡಿದರು. ಈ ಚಳವಳಿಗೆ ರಾಷ್ಟ್ರದ ಎಲ್ಲ ಕಾರ್ಮಿಕ ಸಂಘಗಳು ಬೆಂಬಲ ದೊರಕಿತು. ಮೊಟ್ಟಮೊದಲು ಕಾಲೊರಾಡೂ ರಾಜ್ಯ ಆ ದಿನವನ್ನು ಕಾರ್ಮಿಕ ದಿನವೆಂದು ಮಾನ್ಯ ಮಾಡಲು 1887ರ ಮಾರ್ಚಿ 15ರಂದು ಕಾಯಿದೆಯೊಂದನ್ನು ಅನುಮೋದಿಸಿತು. ಇದೇ ಕ್ರಮವನ್ನು ಇತರ ಕೆಲವು ರಾಜ್ಯಗಳೂ ಅನುಸರಿಸಿದುವು (ನ್ಯೂಯಾರ್ಕ್, ನ್ಯೂ ಜರ್ಸಿ, ಮಸಚುಸೆಟ್ಸ್). ಅಮೆರಿಕಾದ್ಯಂತ ಅಂದು ರಜಾ ದಿನವೆಂದು ಘೋಷಿಸುವ ವಿಧೇಯಕಕ್ಕೆ ಅಮೆರಿಕದ ಕಾಂಗ್ರೆಸ್ 1894ರ ಜೂನ್ 28ರಂದು ಒಪ್ಪಿಗೆ ನೀಡಿತು. ಇದನ್ನು ಕಾರ್ಯರೂಪಕ್ಕೆ ತರಲು ಎಲ್ಲ ರಾಜ್ಯಗಳೂ ಸಮ್ಮತಿಸಿ, ಆ ಪ್ರಕಾರ ಅಗತ್ಯವಾದ ಕಾಯಿದೆ ಮಾಡಿದುವು. ಕೆನಡದಲ್ಲಿ ಬಹುತೇಕ ಪ್ರಾಂತ್ಯಗಳಲ್ಲಿ ಕಾರ್ಮಿಕ ದಿನಾಚರಣೆಗೆ ಕಾನೂನು ರಚಿಸಲಾಗಿದೆ. ಕಾನೂನಿಲ್ಲದ ಪ್ರಾಂತ್ಯಗಳಲ್ಲಿ ಆಯಾ ಗವರ್ನರುಗಳು ಆ ಬಗ್ಗೆ ಘೋಷಣೆ ನೀಡುತ್ತಾರೆ. ಅಮೆರಿಕ ಕೆನಡಗಳಲ್ಲಿ ಎಲ್ಲ ವರ್ಗಗಳ ಜನರೂ ಅದನ್ನು ಆಚರಿಸುತ್ತಾರೆ. ಅಂದು ಬಹುತೇಕ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನೂ ಮುಚ್ಚಲಾಗುತ್ತದೆ. ಸಭೆ, ವನಭೋಜನ, ಪ್ರದರ್ಶನ, ಮೆರವಣಿಗೆ, ಭಾಷಣ, ಕ್ರೀಡೆಗಳು- ಇವು ಅಂದು ಸಾಮಾನ್ಯ.
ಕಾರ್ಮಿಕ ಕಾನೂನುಗಳು
ADD ARTICLE DESCRIPTION
ಇತರರ ಅಧೀನದಲ್ಲಿ, ಎಂದರೆ ತಮ್ಮ ನೇಮಕದಾರರ, ಉದ್ಯೋಗದಾತರ, ಧಣಿಗಳ ಅಥವಾ ಯಜಮಾನರ ಕೈಕೆಳಗೆ, ದುಡಿಯುವ ಜನರ ಕೆಲಸಕ್ಕೆ ಸಂಬಧಿಸಿದಂತೆ ರಚಿತವಾದ ಎಲ್ಲ ಕಾನೂನುಗಳು (ಲೇಬರ್ ಲಾಸ್). ಇವನ್ನು ಕೈಗಾರಿಕಾ ಕಾನೂನುಗಳು ಅಥವಾ ಕೈಗಾರಿಕಾ ನ್ಯಾಯ ಎಂದೂ ಕರೆಯುವುದುಂಟು. ಆದರೆ ಕೈಗಾರಿಕೋದ್ಯಮಗಳಲ್ಲಿ ದುಡಿಯುವವರು ಮಾತ್ರವೇ ಈಕಾನೂನುಗಳ ಪರಿಮಿತಿಯೊಳಕ್ಕೆ ಬರುವುದಿಲ್ಲವಾದ್ದರಿಂದ ಇವನ್ನು ಕಾರ್ಮಿಕ ಕಾನೂನುಗಳು ಎಂದು ಕರೆಯುವುದೇ ಸೂಕ್ತ. ಉದ್ಯೋಗದಾತನಿಗೂ ಅವನ ಅಧೀನದಲ್ಲಿ ಕೆಲಸ¸ ಮಾಡುವವನಿಗೂ ಏರ್ಪಡುವ ಸಂಬಂಧವನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸುವುದು ಅವಶ್ಯ. ಯಜಮಾನ-ಕಾರ್ಮಿಕರ ನಡುವಣ ಸಂಬಂಧ ವಾಸ್ತವವಾಗಿರಲಿ ಅಥವಾ ಮುಂದೆ ಉದ್ಭವಿಸುವಂಥದಾಗಿರಲಿ, ಕಾರ್ಮಿಕನ ದುಡಿಮೆ ದೈಹಿಕವಾದ್ದಾಗಿರಲಿ, ಮಾನಸಿಕವಾದ್ದಾಗಿರಲಿ-ಇಂಥ ಎಲ್ಲ ಸಂದರ್ಭಗಳಿಗೂ ಕಾರ್ಮಿಕ ಕಾನೂನುಗಳು ಅನ್ವಯಿಸುತ್ತವೆ. ಕೆಲಸಗಾರ ನೇಮಕದಾರನಿಗೆ ಅಧೀನನೇ ಅಲ್ಲವೇ-ಎಂಬುದೇ ಪರಿಗಣಿಸಬೇಕಾದ ಅಂಶ. ಸ್ವತಂತ್ರವಾಗಿ ದುಡಿಮೆಯುವವನಿಗೆ ಕಾರ್ಮಿಕ ಕಾನೂನುಗಳು ಅನ್ವಯಿಸುವುದಿಲ್ಲ. ಆದರೆ ಅಧೀನವರ್ತಿ ಕೆಲಸಗಾರ ಯಾರು, ಸ್ವತಂತ್ರ ಗುತ್ತಿಗೆದಾರ ಯಾರು-ಎಂಬುದನ್ನು ನಿರ್ಣಯಿಸುವುದು ಸುಲಭವಲ್ಲ. ವೃತ್ತಿಪರಿಣತರ ದುಡಿಮೆಯ ಲಕ್ಷಣವನ್ನು ಕೂಡ ಅನೇಕ ವೇಳೆ ಖಚಿತವಾಗಿ ನಿರ್ಣಯಿಸುವುದು ಕಷ್ಟ . ಕೆಲಸಗಾರನ ಕೆಲಸದ ವಿಧಾನ, ಗುಣ ಮತ್ತು ಪರಿಮಾಣಗಳ ಮೇಲೆ ಯಜಮಾನನ ಹತೋಟಿ ಇರುವಡೆಗಳೆಲ್ಲ ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತವೆ. ಈ ವ್ಯಾಪಕವಾದ ಅರ್ಥದಲ್ಲಿ ಪರಿಗಣಿಸಿದಾಗ, ಕಾರ್ಮಿಕರ ಸಂಘಟನೆ, ನಿರುದ್ಯೋಗ ನಿವಾರಣೆ, ಕೈಗಾರಿಕಾ ಸಂಬಂಧಗಳು, ಮುಷ್ಕರಗಳು, ಕಾರ್ಖಾನೆಗಳ ಬೀಗಮುದ್ರೆ-ಮುಂತಾದವಕ್ಕೆ ಸಂಬಂಧಿಸಿದ ಕಾನೂನುಗಳನ್ನೂ ಈ ಶೀರ್ಷಿಕೆಯ ಅಡಿಯಲ್ಲೇ ಪರಿಶೀಲಿಸಬೇಕಾಗುತ್ತದೆ. ಅವನ್ನೆಲ್ಲ ಪ್ರಕೃತ ಲೇಖನ ಒಳಗೊಂಡಿಲ್ಲ. ಆ ವಿಶಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಲೇಖನಗಳಿವೆ. ಕಾರ್ಮಿಕರ ಕೆಲಸಕ್ಕೆ ಸಂಬಂಧಿಸಿದ ಸಾಮಾನ್ಯ ಕಾನೂನುಗಳನ್ನು ಇಲ್ಲಿ ವಿವೇಚಿಸಲಾಗಿದೆ. ದೇಶದ ಉತ್ಪಾದನಾ ಕಾರ್ಯದಲ್ಲಿ ನಿರತರಾದ ಮಾಲೀಕರೂ ಕಾರ್ಮಿಕರೂ ಸಹವರ್ತಿಸಿ ನಡೆಯುವಂತೆ ಮಾಡುವುದು ಸರ್ಕಾರದ ಕರ್ತವ್ಯ. ಈ ಉದ್ದೇಶದಿಂದಲೇ ಕಾರ್ಮಿಕ ಕಾನೂನುಗಳು ಜಾರಿಗೆ ಬಂದಿವೆ. ನಿಷ್ಪಕ್ಷದೃಷ್ಟಿ, ನೀತಿಪಾಲನೆ, ಅಂತರರಾಷ್ಟ್ರೀಯ ಏಕರೂಪತೆ, ಜನತೆಯ ಆರ್ಥಿಕ ಆಡಳಿತ-ಇವು ಕಾರ್ಮಿಕ ಕಾನೂನುಗಳಿಗೆ ಆಧಾರಭೂತವಾದ ತತ್ತ್ವಗಳು.
ಕಾರ್ಮಿಕ ಕಾನೂನುಗಳ ಪೈಕಿ ಅತ್ಯಂತ ಹಳೆಯವು ಬಹುಸಂಖ್ಯೆಯವೂ ಆದಂಥವು ಕಾರ್ಖಾನೆಗಳಲ್ಲಿಯ ಉದ್ಯೋಗಗಳಿಗೆ ಸಂಬಂಧಿಸಿದವು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಕೈಗಾರಿಕೀಕರಣದ ಯುಗದಲ್ಲಿ ಕಾರ್ಖಾನೆಗಳ ಸಂಖ್ಯೆ ಬಹು ಶೀಘ್ರವಾಗಿ ವರ್ಧಿಸತ್ತಿದೆ. ಅವುಗಳಲ್ಲಿಯ ಉದ್ಯೋಗದ ಸ್ಥಿತಿಗಳನ್ನು ಕ್ರಮಗೊಳಿಸುವುದು ಅಗತ್ಯವೆಂದು ಸರ್ಕಾರ ಪರಿಗಣಿಸಿದೆ. 1881ರಲ್ಲಿ ಜಾರಿಗೆ ಬಂದ ಭಾರತೀಯ ಕಾರ್ಖಾನೆಗಳ ಕಾಯಿದೆ ಅತ್ಯಂತ ಪ್ರಾಚೀನವಾದ್ದು. ಭಾರತದ ಪ್ರಥಮ ಕೈಗಾರಿಕೋದ್ಯಮಗಳಾದ ಹತ್ತಿಗಿರಣಿಗಳಲ್ಲಿಯ ಉದ್ಯೋಗ ಸ್ಥಿತಿಗಳನ್ನು ಕ್ರಮಗೊಳಿಸುವ ಉದ್ದೇಶದಿಂದ ಈ ಕಾಯಿದೆಯನ್ನು ಜಾರಿಗೆ ತರಲಾಯಿತು. ಇದರ ಅನಂತರ ಅನೇಕ ಕಾಯಿದೆಗಳು ಬಂದು ಮೊದಲನೆಯ ಕಾಯಿದೆಯ ಉದ್ದೇಶಗಳನ್ನು ಮುಂದುವರಿಸಿದುವು. 1948ರಲ್ಲಿ ಜಾರಿಗೆ ಬಂದ ಕಾರ್ಖಾನೆಗಳ ಕಾಯಿದೆ ಅತ್ಯಂತ ವ್ಯಾಪಕವಾಗಿವೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಆರೋಗ್ಯ, ಸುರಕ್ಷಣೆ, ಕಲ್ಯಾಣ, ವಯಸ್ಕರ ಕೆಲಸದ ಅವಧಿ, ಕಿರಿಯರ ನೇಮಕ, ಕೂಲಿಸಹಿತ ರಜಾ ನೀಡಿಕೆ ಮುಂತಾದ ನಾನಾ ವಿಚಾರಗಳನ್ನು ಕುರಿತ ನಿಬಂಧನೆಗಳಿವೆ. ಇವನ್ನು ಅನುಸರಿಸುವ ಸಲುವಾಗಿ ಪ್ರತಿಯೊಂದು ಕಾರ್ಖಾನೆಯ ಒಡೆಯ, ಅನುಭವದಾರ, ವ್ಯವಸ್ಥಾಪಕ ಮುಂತಾದವರ ಹೊಣೆಯನ್ನು ನಿರ್ಧರಿಸಲಾಗಿದೆ. ಈ ಹೊಣೆ ನಿರ್ವಹಿಸದಿರುವುದು ದಂಡಾರ್ಹ ಅಪರಾಧ.
ವಿದ್ಯುತ್ ಅಥವಾ ಬೇರಾವ ನಿರ್ಜೀವಿ ಶಕ್ತಿಯ ನೆರವಿನಿಂದ ಉತ್ಪಾದನೆಯ ಕಾರ್ಯ ನಡೆಸುವುದು ಒಂದು ವಿಧವಾದರೆ, ಅಂಥ ಯಾವ ನಿರ್ಜೀವಿ ಶಕ್ತಿಯ ನೆರವೂ ಇಲ್ಲದೆ ಉತ್ಪಾದನೆಯ ಕಾರ್ಯ ನಡೆಸುವುದು ಇನ್ನೊಂದು ವಿಧ. 10 ಅಥವಾ ಅದಕ್ಕಿಂತ ಹೆಚ್ಚು ಮಂದಿ ಉದ್ಯೋಗಿಗಳನ್ನುಳ್ಳ ಮೊದಲನೆಯ ಬಗೆಯ ಕಾರ್ಖಾನೆಯೂ 20 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡಿರುವ ಎರಡನೆಯ ಬಗೆಯ ಕಾರ್ಖಾನೆಯೂ ಈ ಕಾಯಿದೆಯ ವ್ಯಾಪ್ತಿಯೊಳಕ್ಕೆ ಬರುತ್ತವೆ. ಅನುಕ್ರಮವಾಗಿ ಇಷ್ಟು ಕನಿಷ್ಠ ಸಂಖ್ಯೆಗಳನ್ನು ಹೊಂದಿರದ ಉತ್ಪಾದನಾಲಯಗಳು ಈ ಕಾಯಿದೆಯ ವ್ಯಾಖ್ಯೆಯ ಪ್ರಕಾರ ಕಾರ್ಖಾನೆಗಳೆನಿಸಿಕೊಳ್ಳುವುದಿಲ್ಲ. ಗಣಿ, ರೈಲ್ವೆ ರನಿಂಗ್ ಷೆಡ್ ಇವು ಈ ಕಾಯಿದೆಗೆ ಒಳಪಡುವುದಿಲ್ಲ. ಇವುಗಳ ಕಾರ್ಮಿಕರಿಗೆ ಪ್ರತ್ಯೇಕ ಕಾಯಿದೆಗಳಿವೆ. ಕಾರ್ಖಾನೆಯಲ್ಲಿಯ ರದ್ದಿ, ದೂಳು, ಹೊಗೆ ಮುಂತಾದವುಗಳ ಉಚ್ಚಾಟನೆಗೆ ಕ್ರಮ ಕೈಕೊಳ್ಳಬೇಕು. ಗಾಳಿ ಬೆಳಕುಗಳಿಗೆ ಅವಕಾಶವಿರಬೇಕು. ಕಾರ್ಖಾನೆಯ ಶಾಖ ಹಿತಕರವಾದ ಮಟ್ಟದಲ್ಲಿರಬೇಕು. ಅತಿ ಶೈತ್ಯ ಇರಬಾರದು. ಕಾರ್ಮಿಕನ ಆರೋಗ್ಯಕ್ಕೆ ಬಾಧಕವುಂಟಾಗಬಾರದು. ಅಧಿಕ ಸಂದಣಿಯನ್ನೂ ನಿಷೇಧಿಸಲಾಗಿದೆ. ಕಾರ್ಮಿಕರಿಗೆ ಕುಡಿಯುವ ನೀರನ್ನೊದಗಿಸುವುದೂ ನೈರ್ಮಲ್ಯ ಸಾಧನೆಯೂ ಮುಖ್ಯವೇ. ಅಪಾಯಕಾರಿ ಯಂತ್ರಗಳ ಸುತ್ತ ಬೇಲಿ ಅಥವಾ ಕಟಕಟೆ ನಿರ್ಮಿಸಬೇಕು. ಅಂಥ ಯಂತ್ರಗಳನ್ನು ನಡೆಸಲು ಮಕ್ಕಳನ್ನು ನೇಮಿಸಿ ಕೊಳ್ಳುವುದನ್ನು ನಿಷೇಧಿಸಲಾಗಿದೆ. ಕಾರ್ಮಿಕರಿಗಾಗಿ ವಿಶ್ರಾಂತಿಗೃಹ, ಪ್ರಥಮ ಚಿಕಿತ್ಸೆ, ಉಪಾಹಾರ ಮಂದಿರ, ಹೆಂಗಸರು ಮಕ್ಕಳಿಗಾಗಿ ಪ್ರತ್ಯೇಕ ಕೋಣೆಗಳು-ಇಂಥ ಸೌಲಭ್ಯಗಳನ್ನೂ ಕಲ್ಪಿಸುವುದು ಅವಶ್ಯ. ಕಾರ್ಮಿಕರ ದುಡಿಮೆಯ ಕಾಲವನ್ನು ನಿಗದಿ ಮಾಡಲಾಗಿದೆ. 14 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ ನೇಮಿಸಿಕೊಳ್ಳುವಂತಿಲ್ಲ.
ಕಾರ್ಮಿಕನಿಗೆ ತೊಂದರೆಯಾಗದಂತೆ, ನೆಮ್ಮದಿ ಭಂಗವಾಗದಂತೆ, ಅವನ ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಕಾರ್ಖಾನೆ ಕಾಯಿದೆಯ ಮತ್ತು ಅಂಥ ಇತರ ಕಾಯಿದೆಗಳ ಉದ್ದೇಶ. ಕಾರ್ಮಿಕರ ದುಡಿಮೆಯ ಸಮಯದಲ್ಲಿ ಸಂಭವಿಸಬಹುದಾದ ಕ್ಷತಿ ಅಥವಾ ಸಾವಿಗೆ ಸೂಕ್ತ ಪರಿಹಾರ ನೀಡುವ ಕಾಯಿದೆ 1923ಕ್ಕೆ ಹಿಂದೆ ಭಾರತದಲ್ಲಿ ಇರಲಿಲ್ಲ. ನೊಂದ ಕಾರ್ಮಿಕರು ಪರಿಹಾರಕ್ಕಾಗಿ ನ್ಯಾಯಾಲಯಗಳಿಗೆ ಹೋಗಲು ಅವರಿಗೆ ಆರ್ಥಿಕ ಶಕ್ತಿಯಿರಲಿಲ್ಲ. ಈ ತೊಂದರೆಯ ನಿವಾರಣೆಗಾಗಿ 1923ರಲ್ಲಿ ಕಾರ್ಮಿಕರ ನಷ್ಟ ಪರಿಹಾರ ಕಾಯಿದೆ ಅಂಗೀಕೃತವಾಗಿ ಮರುವರ್ಷದಿಂದ ಜಾರಿಗೆ ಬಂತು. 400 ರೂ.ಗಳಿಗೆ ಮೀರದ ಮಾಸಿಕ ಕೂಲಿ ಪಡೆಯುವ ಪ್ರತಿಯೊಬ್ಬ ಕಾರ್ಮಿಕನಿಗೂ ಇದು ಅನ್ವಯವಾಗುತ್ತದೆ. ಉದ್ಯೋಗದ ಫಲವಾಗಿ ಮತ್ತು ಆ ಕಾಲದಲ್ಲಿ ಸಂಭವಿಸುವ ವೈಯಕ್ತಿಕ ಕ್ಷತಿಗೆ (ಇಂಜುರಿ) ಮತ್ತು ಆ ಕ್ಷತಿಯಿಂದಾದ ಪ್ರಾಣನಷ್ಟಕ್ಕೆ ನೇಮಕದಾರ ನೀಡಬೇಕಾದ ಪರಿಹಾರದ ದರಗಳನ್ನು ನಿಷ್ಕರ್ಷಿಸಲಾಗಿದೆ. ಕಾರ್ಮಿಕ ಪರಿಹಾರವನ್ನು ಇತ್ಯರ್ಥ ಮಾಡುವುದಕ್ಕಾಗಿ ಪ್ರತಿಯೊಂದು ರಾಜ್ಯ ಸರ್ಕಾರವೂ ಒಬ್ಬ ಕಮಿಷನರನ್ನು ನೇಮಿಸಬೇಕು. ಈ ಕಾಯಿದೆಯ ಅಡಿಯಲ್ಲಿ ಪರಿಹಾರ ಪಡೆಯಲಿಚ್ಛಿಸಿದ ಕಾರ್ಮಿಕನಿಗೆ ಸಿವಿಲ್ ನ್ಯಾಯಾಲಯದಲ್ಲಿ ತನ್ನ ನೇಮಕದಾರನ ವಿರುದ್ಧ ದಾವ ಹೂಡಲೂ ಅವಕಾಶವುಂಟು. ಕಾರ್ಮಿಕ ಪರಿಹಾರ ಕಾಯಿದೆಯನ್ವಯ ಹೆಚ್ಚು ಶೀಘ್ರವಾಗಿ ಪರಿಹಾರ ದೊರಕಿಸಿಕೊಳ್ಳುವುದು ಸಾಧ್ಯ. ಅಲ್ಲದೆ ಈ ಕಾಯಿದೆಯ ವ್ಯಾಪ್ತಿ ಹೆಚ್ಚು ವಿಶಾಲ. ನೇಮಕದಾರನೇ ಕಾರ್ಮಿಕನ ಕ್ಷತಿ ಅಥವಾ ಸಾವಿಗೆ ಕಾರಣನಲ್ಲದಿದ್ದಾಗಲೂ ಪರಿಹಾರ ಪಡೆಯಬಹುದು. ಕೆಲಸದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಾರ್ಮಿಕ ಹೋಗುತ್ತಿದ್ದಾಗ ಅಪರಿಚಿತನೊಬ್ಬನಿಂದ ಕೊಲೆ ಆದಾಗಲೂ ನೇಮಕದಾರ ಪರಿಹಾರ ನೀಡಬೇಕಾಗಿ ಬಂದ ಘಟನೆಯ ದಾಖಲೆಯಿದೆ. ಸಾಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಇದು ಸಾಧ್ಯವಾಗದು.
ಕಾರ್ಖಾನೆಗಳ ಅಥವಾ ರೈಲ್ವೆಗಳ ಉದ್ಯೊಗಿಗಳಿಗೆ ಕೂಲಿ ಪಾವತಿ ಮಾಡಬೇಕಾದ ಸಮಯ ಮತ್ತು ವಿಧಾನಗಳನ್ನು ನಿಬಂಧಿಸುವುದು ಇದರ ಉದ್ದೇಶ. ಇತರ ಕೈಗಾರಿಕ ಸ್ಥಾಪನಗಳಿಗೂ (ಎಸ್ಟಾಬ್ಲಿಷ್‍ಮೆಂಟ್ಸ್) ಇದನ್ನು ಅನ್ವಯಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶವುಂಟು. ಟ್ರಾಂವೇ, ಮೋಟಾರ್ ಸಾರಿಗೆ, ಬಂದರು, ಗಣಿ, ಪ್ಲಾಂಟೇಷನ್, ಕಾರ್ಯಗಾರ ಮುಂತಾದವೆಲ್ಲ ಕೈಗಾರಿಕಾ ಸ್ಥಾಪನದ ವ್ಯಾಖ್ಯೆಯೊಳಗೆ ಬರುತ್ತವೆ. ಆ ಅವಧಿ ಒಂದು ತಿಂಗಳಿಗಿಂತ ಅಧಿಕವಾಗಿರಬಾರದು. 1,000 ಜನಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಪ್ರತಿಯೊಂದು ಸ್ಥಾಪನವೂ ಕೂಲಿ ಅವಧಿಯ ಕೊನೆಯ ದಿನ ಕಳೆದ ಏಳು ದಿನಗಳೊಳಗೆ ಅವರಿಗೆ ಕೂಲಿ ಪಾವತಿ ಮಾಡಬೇಕು. ಉದ್ಯೋಗಿಗಳ ಸಂಖ್ಯೆ ಇದಕ್ಕಿಂತ ಹೆಚ್ಚಾಗಿದ್ದಲ್ಲಿ ಮೇಲೆ ಹೇಳಿದ ಅವಧಿಯ ಅನಂತರ ಹತ್ತು ದಿನಗಳೊಳಗಾಗಿ ಪಾವತಿ ಮಾಡಬೇಕು. ಯಾವ ಉದ್ಯೋಗಿಯನ್ನಾದರೂ ಕೆಲಸದಿಂದ ತೆಗೆದು ಹಾಕಿದಾಗ, ಅವನಿಗೆ ಸಲ್ಲಬೇಕಾದ ಕೂಲಿಯನ್ನು ಆ ದಿನದಿಂದ ಎರಡನೆಯ ಕೆಲಸದ ದಿನ ಮುಗಿಯುವುದರೊಳಗೆ ಪಾವತಿ ಮಾಡಬೇಕು. ಉದ್ಯೋಗಿಗೆ ಸಲ್ಲಬೇಕಾದ ಕೂಲಿಯ ಮೊಬಲಗಿನಿಂದ ಕಾಯಿದೆಯಲ್ಲಿ ಅಧಿಕಾರ ನೀಡಲಾದವಕ್ಕಲ್ಲದೆ ಬೇರಾವುದಕ್ಕೂ ಹಣವನ್ನು ಕಳೆಯಬಾರದು. ಕೂಲಿ ಪಾವತಿ ಕಾಯಿದೆಯ ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಬಂಧನೆಗಳ ಸಾರಾಂಶವನ್ನು ಪ್ರತಿಯೊಬ್ಬ ನೇಮಕದಾರನೂ ಇಂಗ್ಲಿಷಿನಲ್ಲೂ ಅಲ್ಲಿ ಕೆಲಸಮಾಡುವವರಲ್ಲಿ ಬಹು ಸಂಖ್ಯಾತರಾದವರ ಬಾಷೆಯಲ್ಲೂ ಕಾರ್ಖಾನೆಯ ಪ್ರಕಟನೆ ಹಲಗೆಯ ಮೇಲೆ ಪ್ರದರ್ಶಿಸಬೇಕು.
ವಿವಿಧ ಉದ್ಯೋಗಗಳಲ್ಲಿ ಪಾವತಿ ಮಾಡಬೇಕಾದ ಕನಿಷ್ಠ ಕೂಲಿಯನ್ನು ನಿಗದಿ ಮಾಡಲು ಈ ಕಾಯಿದೆಯಿಂದ ರಾಜ್ಯ ಸರ್ಕಾರಗಳಿಗೆ ಅಧಿಕಾರ ದತ್ತವಾಗಿದೆ. ಇದು ಅಧಿಕಾರ ಮಾತ್ರವೇ ಅಲ್ಲ, ಅವುಗಳ ಕರ್ತವ್ಯ. ನಿಗದಿಯಾದ ಕನಿಷ್ಠ ಕೂಲಿಗಿಂತ ಕಡಿಮೆ ಕೊಡುವ ಯಜಮಾನ ದಂಡಾರ್ಹ ಅಪರಾಧ ಮಾಡಿದಂತೆ. ಅವನಿಗೆ ಸಜಾ ಅಥವಾ ಜುಲ್ಮಾನೆಯನ್ನು-ಅಥವಾ-ಎರಡನ್ನೂ ವಿಧಿಸ ಬಹುದು.
ಉದ್ಯೋಗಿಗಳ ಕಾಯಿಲೆ, ಪ್ರಸೂತಿ, ಅಂಗಹಾನಿ, ಅವಲಂಬಿಗಳು, ವೈದ್ಯಕೀಯ ಪರಿಕ್ಷಣ-ಮುಂತಾದವಕ್ಕಾಗಿ ಸೌಲಭ್ಯ ನೀಡುವುದು ಈ ಕಾಯಿದೆಯ ಉದ್ದೇಶ. ಇದಕ್ಕಾಗಿ ನಿರ್ಮಿಸಲಾಗಿರುವ ಉದ್ಯೋಗಿಗಳ ರಾಜ್ಯ ವಿಮಾ ನಿಧಿಗೆ ಸರ್ಕಾರವೂ ಯಜಮಾನರೂ ಉದ್ಯೋಗಿಗಳೂ ಅಂಶದಾನ (ಕಾಂಟ್ರಿಬ್ಯೂಷನ್) ನೀಡಬೇಕು. ಉದ್ಯೋಗಿಯ ಅಂಶದಾನವನ್ನು ಅವನಿಗೆ ಕೊಡಬೇಕಾದ ಕೂಲಿಯಿಂದ ಕಳೆದು ನಿಧಿಗೆ ಕಟ್ಟಲಾಗುತ್ತದೆ. ಈ ಕಾರ್ಯಭಾರ ನಿರ್ವಹಿಸುವುದಕ್ಕಾಗಿ ಉದ್ಯೋಗಿಗಳ ರಾಜ್ಯ ವಿಮಾ ಕಾರ್ಪೋರೇಷನ್ ಸ್ಥಾಪಿತವಾಗಿದೆ. ಕೇಂದ್ರ ರಾಜ್ಯ ಸರ್ಕಾರಗಳ, ನೇಮಕದಾರರ, ಉದ್ಯೋಗಿಗಳ ಮತ್ತು ವೈದ್ಯ ವೃತ್ತಿ ನಿರತರ ಪ್ರತಿನಿಧಿಗಳು ಇದರ ಸದಸ್ಯರು.
ಯಾವುದೇ ಸ್ಥಾಪನದ ಉದ್ಯೋಗಿಗಳಿಗಾಗಿ ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಸ್ಥಾಪಿಸಿ, ಅದಕ್ಕೆ ಉದ್ಯೋಗಿಯ ಕೂಲಿಯ ಮೊಬಲಗಿಗೆ ಅನುಗುಣವಾಗಿ ನೇಮಕದಾರ ಮತ್ತು ಉದ್ಯೋಗಿ ಇವರಿಬ್ಬರಿಂದಲೂ ಅಂಶದಾನ ಪಡೆದು, ಉದ್ಯೋಗಿ ನಿವೃತ್ತನಾದಾಗ ಅದನ್ನು ಅವನಿಗೆ ಬಡ್ಡಿಯೊಂದಿಗೆ ವಾಪಸು ಕೊಡುವ ವ್ಯವಸ್ಥೆ ಮಾಡುವುದು ಈ ಕಾಯಿದೆಯ ಉದ್ದೇಶ.
ನೇಮಕದಾರರಿಗೂ ಉದ್ಯೋಗಿಗಳಿಗೂ ನಡುವೆ ವಿವಾದ ಉದ್ಭವಿಸದಂತೆ ತಡೆಯುವುದೂ ಒಂದು ವೇಳೆ ಉದ್ಭವಿಸಿದರೆ ಅದನ್ನು ಇತ್ಯರ್ಥಪಡಿಸುವುದು ಈ ಕಾಯಿದೆಯ ಉದ್ದೇಶ. ಈ ಕಾಯಿದೆಗೆ ಆಗಾಗ್ಗೆ ಸೂಕ್ತ ತಿದ್ದುಪಡಿಗಳನ್ನು ಜಾರಿಗೆ ತರಲಾಗಿದೆ. ನಿಗದಿ ಮಾಡಲಾದ ಕನಿಷ್ಠ ಸಂಖ್ಯೆಗಿಂತ ಕಡಿಮೆ ಉದ್ಯೋಗಿಗಳಿಲ್ಲದ ಪ್ರತಿಯೊಂದು ಕೈಗಾರಿಕಾ ಸ್ಥಾಪನದಲ್ಲೂ ಕಾರ್ಮಿಕರ ಸಮಿತಿಯೊಂದನ್ನು ರಚಿಸಬೇಕು. ನೇಮಕದಾರ, ಕಾರ್ಮಿಕರು-ಎರಡೂ ಪಕ್ಷಗಳ ಸಮಸಮ ಪ್ರತಿನಿಧಿಗಳಿರುವ ಈ ಸಮಿತಿಯ ಮುಖ್ಯ ಉದ್ದೇಶವೆಂದರೆ ಉದ್ಯೋಗಿಗಳ ಮತ್ತು ನೇಮಕದಾರರ ನಡುವೆ ಸಾಮರಸ್ಯ ಸ್ಥಾಪನೆ. ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಮಿತಿ ಪ್ರಯತ್ನಿಸುತ್ತದೆ.ಯಾವ ವಿಚಾರದಲ್ಲಾದರೂ ವಿವಾದ ಉದ್ಭವಿಸಿದ ಸಂದರ್ಭದಲ್ಲಿ ಎರಡೂ ಪಕ್ಷಗಳ ನಡುವೆ ಸಂಧಾನ ನಡಸಿ ರಾಜಿ ಮಾಡಿಸಲು ಸಂಧಾನಾಧಿಕಾರಿಗಳನ್ನು ನೇಮಿಸಲು ಸರ್ಕಾರಕ್ಕೆ ಅಧಿಕಾರವುಂಟು. ಅವರಿಂದ ವಿವಾದ ಇತ್ಯರ್ಥವಾಗದಿದ್ದರೆ ಸರ್ಕಾರ ಅನುಸರಿಸಬಹುದಾದ ಕ್ರಮಗಳು ಇವು : 1 ರಾಜಿ ಮಂಡಳಿಯೊಂದಕ್ಕೆ ವಿವಾದದ ಸಲ್ಲಿಕೆ ; 2 ವಿವಾದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ವಿಚಾರಣೆ ನಡೆಸಿ ವರದಿ ಒಪ್ಪಿಸಲು ವಿಚಾರಣಾಲಯಕ್ಕೆ ಅದರ ಸಲ್ಲಿಕೆ ; 3 ಕೆಲಸಗಾರರ ವಜಾ, ಅವರಿಗೆ ನೀಡಲಾಗಿದ್ದ ಸೌಲಭ್ಯಗಳ ರದ್ದು, ಮುಷ್ಕರ, ಬೀಗಮುದ್ರೆ ಮುಂತಾದ ವಿಚಾರಗಳಿಗೆ ಸಂಬಂಧಿಸಿದ್ದಂತೆ ಉದ್ಭವಿಸುವ ವಿವಾದಗಳನ್ನು ವಿಚಾರಣೆಗಾಗಿ ಕಾರ್ಮಿಕ ನ್ಯಾಯಾಲಯಕ್ಕೆ ಒಪ್ಪಿಸುವುದು ; 4 ವಿವಾದದ ಬಗ್ಗೆ ನ್ಯಾಯ ನಿರ್ಣಯ (ಅಡ್ಜೂಡಿಕೇಷನ್) ನೀಡಲು ನ್ಯಾಯಪೀಠವೊಂದಕ್ಕೆ ಅದನ್ನು ಒಪ್ಪಿಸುವುದು. ವಿವಾದಕ್ಕೆ ಸಂಬಂಧಿಸಿದ ಪಕ್ಷಗಳು ತಮ್ಮ ವ್ಯಾಜ್ಯವನ್ನು ಪಂಚಾಯಿತಿಗೆ ಒಪ್ಪಿಸಬಹುದು. ಮೇಲೆ ಹೇಳಿದ ನಾನಾ ಪ್ರಾಧಿಕಾರಗಳ (ಅಥಾರಿಟೀಸ್) ರಚನೆ, ಅವುಗಳ ಕಾರ್ಯಭಾರ, ಕರ್ತವ್ಯ-ಇವನ್ನೆಲ್ಲ ಕಾಯಿದೆಯಲ್ಲಿ ವಿವರಿಸಲಾಗಿದೆ. ಕಾನೂನಿಗೆ ವಿರೋಧವಾದ ರೀತಿಯಲ್ಲಿ ಮುಷ್ಕರ ಅಥವಾ ಕಾರ್ಖಾನೆಯ ಬೀಗಮುದ್ರೆಗೆ ಕಾರಣರಾದವರು ಕಾಯಿದೆಯ ಪ್ರಕಾರ ಶಿಕ್ಷಾರ್ಹರು. ಕೇಂದ್ರ ಸರ್ಕಾರದ ಸೂಚನೆಯಂತೆ ನೇಮಕದಾರರ ಮತ್ತು ಉದ್ಯೋಗಿಗಳ ಅಖಿಲಭಾರತ ಸಂಸ್ಥೆಗಳು ಕೈಗಾರಿಕೆಯಲ್ಲಿ ಶಿಸ್ತಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯೊಂದನ್ನು ರಚಿಸಿಕೊಂಡಿವೆ.
ಕಾರ್ಮಿಕರ ಹಿತರಕ್ಷಣೆಗಾಗಿ ಇನ್ನೂ ಅನೇಕ ಕಾಯಿದೆಗಳು ಜಾರಿಯಲ್ಲಿದೆ. ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿಯ ಕಾಲದಲ್ಲಿ ಸಂಬಳ ಸಹಿತ ರಜಾ ನೀಡಿಕೆ, ಹಡಗು ಕಟ್ಟೆಗಳಲ್ಲಿ ಕೆಲಸ ಮಾಡುವವರ ಉದ್ಯೋಗ ನಿಯಂತ್ರಣ, ವ್ಯಾಪಾರ ನೌಕೆಗಳ ಕಲಾಪಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳ ರಚನೆ-ಮುಂತಾದ ವಿಶಿಷ್ಟೋದ್ದೇಶಗಳಿಗಾಗಿಯೂ ಕಾಯಿದೆಗಳು ಜಾರಿಯಲ್ಲಿದೆ.(ಬಿ.ವಿ.ಬಿ; ಆರ್.ಕೆ.; ಜಿ.ಬಿ.ಕೆ.)
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ದಿನವನ್ನು ಮೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಅಮೇರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡಗಳಲ್ಲಿ ಅಂದು ಈ ದಿನವನ್ನಾಚರಿಸುವುದಿಲ್ಲ. ಇಟಲಿಯಲ್ಲಿ ಮೇ ದಿನಾಚರಣೆಯನ್ನು ನಿಷೇಧಿಸಲಾಗಿತ್ತಲ್ಲದೆ, ಅದರ ಬದಲು ರೋಮಿನ ಸ್ಥಾಪನೆಯ ದಿನವನ್ನಾಚರಿಸುವ ಏರ್ಪಾಡು ಮಾಡಲಾಗಿತ್ತು. ಸೋವಿಯತ್ ದೇಶದಲ್ಲಿ ಮೇ 1 ಸಾರ್ವಜನಿಕ ರಜಾ ದಿನ.ಹಳೆಯ ಮೇ ದಿನಾಚರಣೆಯೂ ಕಾರ್ಮಿಕ ದಿನವೂ ಒಂದೇ ಎಂಬುದು ಅನೇಕ ಸಮಾಜವಾದಿ ಲೇಖಕರ ಅಭಿಪ್ರಾಯ. ಆದರೆ ಅದು ಬೇರೆ, ಕಾರ್ಮಿಕ ದಿನ ಬೇರೆ-ಎಂದೂ ವಾದಿಸಲಾಗಿದೆ. ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು.
1890ರ ದಶಕದಿಂದ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಮೇ ತಿಂಗಳ 1ರಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತಿದೆ. ಅಂದು ಸಾಮಾನ್ಯವಾಗಿ ಕಾರ್ಮಿಕ ರಜಾದಿನ, ಸೋವಿಯತ್ ದೇಶವೇ ಮುಂತಾದ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಈ ದಿನಾಚರಣೆ ವಿಶಿಷ್ಟವಾದ್ದು. ಮಾಸ್ಕೋದಲ್ಲಿ ನಡೆಯುವ ಮೇ ದಿನದ ಉತ್ಸವ-ಕವಾಯಿತು ವಿಶ್ವವಿಖ್ಯಾತವಾದ್ದು. ಬ್ರಿಟನ್ನಿನಲ್ಲಿ ಕಾರ್ಮಿಕ ದಿನವನ್ನು ಮೇ ದಿನದ ಅನಂತರದ ಪ್ರಥಮ ಭಾನುವಾರದಂದು ಆಚರಿಸುವುದು ಸಾಮಾನ್ಯ. ಲಂಡನಿನಲ್ಲಿ ಹೈಡ್ ಪಾರ್ಕಿನಲ್ಲಿ ಉತ್ಸವಸಭೆ ಸೇರುವುದು ಹಿಂದಿನಿಂದ ಬಂದಿರುವ ಸಂಪ್ರದಾಯ, ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಪ್ರಥಮ ಬಾರಿಗೆ ಆಚರಿಸಿದ್ದು 1892ರಲ್ಲಿ.
ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು.
ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸೆಪ್ಟೆಂಬರ್ ಮೊದಲನೆಯ ಸೋಮವಾರದಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತದೆ. ಆ ದಿನವನ್ನಾಚರಿಸಬೇಕೆಂಬ ಚಳವಳಿಯನ್ನು ಅಲ್ಲಿ ಪ್ರಾರಂಭಿಸಿದವರು ನೈಟ್ಸ್ ಆಫ್ ಲೇಬರ್ ಎಂಬ ಕಾರ್ಮಿಕ ಸಂಘಗಳವರು. 1882, 1883 ಮತ್ತು 1884ರಲ್ಲಿ ಅವರು ಕಾರ್ಮಿಕ ದಿನದಂದು ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನ ನಡೆಸಿದರು. ಪ್ರತಿವರ್ಷದ ಸೆಪ್ಟೆಂಬರ್ ಮೊದಲನೆಯ ಸೋಮವಾರವನ್ನು ಕಾರ್ಮಿಕ ದಿನವೆಂದು ಪರಿಗಣಿಸಬೇಕೆಂದೂ ಅಂದು ರಜಾ ಘೋಷಿಸಬೇಕೆಂದೂ ಅವರು 1884ರಲ್ಲಿ ನಿರ್ಣಯ ಮಾಡಿದರು. ಈ ಚಳವಳಿಗೆ ರಾಷ್ಟ್ರದ ಎಲ್ಲ ಕಾರ್ಮಿಕ ಸಂಘಗಳ ಬೆಂಬಲ ದೊರಕಿತು. ಮೊಟ್ಟಮೊದಲು ಕಾಲೊರಾಡೂ ರಾಜ್ಯ ಆ ದಿನವನ್ನು ಕಾರ್ಮಿಕ ದಿನವೆಂದು ಮಾನ್ಯ ಮಾಡಲು 1887ರ ಮಾರ್ಚಿ 15ರಂದು ಕಾಯಿದೆಯೊಂದನ್ನು ಅನುಮೋದಿಸಿತು. ಇದೇ ಕ್ರಮವನ್ನು ಇತರ ಕೆಲವು ರಾಜ್ಯಗಳೂ ಅನುಸರಿಸಿದುವು (ನ್ಯೂಯಾರ್ಕ್, ನ್ಯೂ ಜರ್ಸಿ, ಮಸಚುಸೆಟ್ಸ್). ಅಮೆರಿಕಾದ್ಯಂತ ಅಂದು ರಜಾ ದಿನವೆಂದು ಘೋಷಿಸುವ ವಿಧೇಯಕಕ್ಕೆ ಅಮೆರಿಕದ ಕಾಂಗ್ರೆಸ್ 1894ರ ಜೂನ್ 28ರಂದು ಒಪ್ಪಿಗೆ ನೀಡಿತು. ಇದನ್ನು ಕಾರ್ಯರೂಪಕ್ಕೆ ತರಲು ಎಲ್ಲ ರಾಜ್ಯಗಳೂ ಸಮ್ಮತಿಸಿ, ಆ ಪ್ರಕಾರ ಅಗತ್ಯವಾದ ಕಾಯಿದೆ ಮಾಡಿದುವು. ಕೆನಡದಲ್ಲಿ ಬಹುತೇಕ ಪ್ರಾಂತ್ಯಗಳಲ್ಲಿ ಕಾರ್ಮಿಕ ದಿನಾಚರಣೆಗೆ ಕಾನೂನು ರಚಿಸಲಾಗಿದೆ. ಕಾನೂನಿಲ್ಲದ ಪ್ರಾಂತ್ಯಗಳಲ್ಲಿ ಆಯಾ ಗವರ್ನರುಗಳು ಆ ಬಗ್ಗೆ ಘೋಷಣೆ ನೀಡುತ್ತಾರೆ. ಅಮೆರಿಕ ಕೆನಡಗಳಲ್ಲಿ ಎಲ್ಲ ವರ್ಗಗಳ ಜನರೂ ಅದನ್ನು ಆಚರಿಸುತ್ತಾರೆ. ಅಂದು ಬಹುತೇಕ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನೂ ಮುಚ್ಚಲಾಗುತ್ತದೆ. ಸಭೆ, ವನಭೋಜನ, ಪ್ರದರ್ಶನ, ಮೆರವಣಿಗೆ, ಭಾಷಣ, ಕ್ರೀಡೆಗಳು- ಇವು ಅಂದು ಸಾಮಾನ್ಯ. (ಎಸ್.ಎನ್.ಎ.)
No comments:
Post a Comment