ಶಿಕ್ಷಣವೇ ಶಕ್ತಿ

Wednesday, 27 December 2023

ಕ್ರಾಂತಿವೀರನಿಗೊಂದು ಸಲಾಂ.
ಕ್ರಾಂತಿವೀರನಿಗೊಂದು ಸಲಾಂ.
ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟ ತಿರುವಿದಾಗ ಕಿತ್ತೂರಿನ ಹೆಸರು ಪ್ರಸ್ತಾಪವಾದ ಕೂಡಲೇ ನೆನಪಾಗುವವರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ. ರಾಣಿ ಚನ್ನಮ್ಮನ ಬಲಗೈ ಬಂಟನಂತಿದ್ದ ರಾಯಣ್ಣನನ್ನು ಬ್ರಿಟಿಷರು ಮೋಸದಿಂದ ಬಂಧಿಸಿ, ನಂದಗಡದಲ್ಲಿ ಗಲ್ಲಿಗೇರಿಸಿ ಇಂದಿಗೆ 185 ವರ್ಷ. ತನ್ನಿಮಿತ್ತ ಈ ಲೇಖನ.
ಇಮಾಮಹುಸೇನ್ ಗೂಡುನವರ
ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು, ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ರಾಯಣ್ಣ ಗಲ್ಲಿಗೇರಿದ ಅವಿಸ್ಮರಣೀಯ ದಿನ ಇಂದು. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡಿ ಗಲ್ಲಿಗೇರಿದವರ ಚರಿತ್ರೆಯೇ ಇದೆ. ಕೆಲವರ ಕುತಂತ್ರಕ್ಕೆ ಒಳಗಾಗಿ ಬ್ರಿಟಿಷರಿಗೆ ಸೆರೆ ಸಿಕ್ಕು ಗಲ್ಲಿಗೆ ಕೊರಳೊಡ್ಡಿದವರ ಪೈಕಿ ಸಂಗೊಳ್ಳಿ ರಾಯಣ್ಣನೂ ಒಬ್ಬ, ಅಪ್ರತಿಮ ದೇಶಭಕ್ತ. ವಿಶೇಷ ಅಂದರೆ ರಾಯಣ್ಣನ ಜನ್ಮದಿನಾಂಕ(ಆ.15)ದಂದೇ ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲ್ಪಡುತ್ತಿದೆ. ಅದೇ ರೀತಿ, ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ದಿನ(ಜ.26)ವೇ ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ.
image
ಅದು ಕ್ರಿ.ಶ 1800ರ ಮಾತು. ದೇಶದ ತುಂಬೆಲ್ಲ ಸಣ್ಣ ಸಣ್ಣ ಸಂಸ್ಥಾನಗಳು- ತುಂಡರಸರದ್ದೇ ಕಾರುಬಾರು. ಅವುಗಳಿಗೆ ಸ್ವಾತಂತ್ರ್ಯ ಅಗತ್ಯ ಇತ್ತು. ದತ್ತು ಪುತ್ರ ಸೌಲಭ್ಯ ಅನುಭವಿಸುವುದಕ್ಕೆ ಹಕ್ಕು ಬೇಕಿತ್ತು. ಈ ದಿಸೆಯಲ್ಲಿ ಇಡೀ ದೇಶಾದ್ಯಂತ ಬ್ರಿಟಿಷರ ವಿರುದ್ಧ ಅಲ್ಲಲ್ಲಿ ದಂಗೆ ಉಂಟಾದವು. ಕೆಲ ಅರಸರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಬ್ರಿಟಿಷರ ಪರ ನಿಂತರೆ, ಅನೇಕರು ಬ್ರಿಟಿಷರ ವಿರುದ್ಧ ತೊಡೆ ತಟ್ಟಿದರು. ಈ ರೀತಿ ಬ್ರಿಟಿಷರ ವಿರುದ್ಧ ತಿರುಗಿಬಿದ್ದ ಸಂಸ್ಥಾನದ ಪೈಕಿ ಮುಂಚೂಣಿಯಲ್ಲಿದ್ದುದು ಕಿತ್ತೂರು. ಇಲ್ಲಿ ಪ್ರಭುತ್ವ ಮುಂದುವರಿಯಬೇಕಾದರೆ ದತ್ತು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಇತ್ತು. ಆದರೆ, ಅದಕ್ಕೆ ಬ್ರಿಟಿಷರ ವಿರೋಧ ಇತ್ತು. ಇಂತಹ ಸಂಸ್ಥಾನದ ಸೇನೆಗೆ ರಾಯಣ್ಣ ಸೇರಿದ್ದೊಂದು ಕಥೆ.
●ಹಿನ್ನೆಲೆ:
ಮಲಪ್ರಭೆಯ ಮಡಿಲಲ್ಲಿರುವ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ರಾಯಣ್ಣನ ಹುಟ್ಟೂರು. ಮೂಲ ಹೆಸರು ರಾಯಪ್ಪ. ಪೂರ್ಣ ಹೆಸರು ರಾಯಣ್ಣ ಭರಮಣ್ಣ ರೋಗಣ್ಣವರ(ಕೆಂಚವ್ವನ ಮಗ). ಈ ದಂಪತಿಗೆ ಮೂವರು ಗಂಡು ಮಕ್ಕಳು. ಕೊನೆಯ ಮಗನೇ ರಾಯಣ್ಣ. ಈತ ಹುಟ್ಟಿದ್ದು 1798ರಲ್ಲಿ. ಇವರದ್ದು ಕೃಷಿ ನಿರತ ಹಾಲುಮತಕ್ಕೆ ಸೇರಿದ ಕುಟುಂಬ. ಹುಟ್ಟೂರಲ್ಲೇ ಬೆಳೆದ ರಾಯಣ್ಣ ಗೆರಿಲ್ಲಾ ಯುದ್ಧ ಪರಿಣತಿ ಹೊಂದಿದ್ದ.
ಅದು 1820ರ ಆಸುಪಾಸಿನ ಅವಧಿ. ರಾಯಣ್ಣನಿಗೆ 24 ವರ್ಷ ವಯಸ್ಸು. ಬಾಳಪ್ಪ ಸಾಧುನವರ, ಬಿಚ್ಚುಗತ್ತಿ ಚನ್ನಬಸಪ್ಪ ಈ ರಾಯಣ್ಣನ ಗೆಳೆಯರು. ಎಲ್ಲರೂ ಸಾಹಸಿಗರು. ರಾಯಣ್ಣನಂತೂ ಗುರಿ ಹೊಡೆಯುವುದರಲ್ಲಿ ನಿಪುಣ ಅಷ್ಟೇ ಅಲ್ಲ ಧೈರ್ಯಶಾಲಿಯೂ ಆಗಿದ್ದ. ಅದೊಂದು ದಿನ ಕಿತ್ತೂರು ಅರಮನೆಯಿಂದ ಈ ಮೂವರಿಗೆ ಸಂದೇಶವೊಂದು ರವಾನೆಯಾಯಿತು. ಅರಮನೆಯ ಅಂಗರಕ್ಷರಾಗಲು ಬನ್ನಿ ಎಂಬುದು ಅದರ ಒಕ್ಕಣೆ. ಹಾಗೆ ಅರಮನೆಗೆ ಕಾಲಿಟ್ಟ ರಾಯಣ್ಣ, ಬಲುಬೇಗ ರಾಣಿ ಚನ್ನಮ್ಮರ ಬಲಗೈ ಬಂಟನಾದ. ಬಲಿಷ್ಠವಾದೊಂದು ಸೈನ್ಯವನ್ನೂ ಕಟ್ಟಿದ.
ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಬ್ರಿಟಿಷರ ವಿರುದ್ಧ ಸಮರ ಸಾರಿದ. ಸಾಮ್ರಾಜ್ಯಷಾಹಿ ಬ್ರಿಟಿಷರು ಬಡವರಿಂದ ದೋಚಿದ್ದ ಅಪಾರ ಸಂಪತ್ತನ್ನು ಕಸಿದುಕೊಂಡಿದ್ದು ಮಾತ್ರವಲ್ಲದೇ, ಸರ್ಕಾರಕ್ಕೆ ಸೇರಿದ್ದ ಹತ್ತು ಹಲವು ಕಡತಗಳು, ಮಹತ್ವದ ದಾಖಲೆಗಳನ್ನು ಸುಟ್ಟು ಕರಕಲು ಮಾಡಿದ. ಬಡಜನರನ್ನು ಲೂಟಿ ಮಾಡುತ್ತಿದ್ದ ಬ್ರಿಟಿಷ್ ಸರ್ಕಾರಕ್ಕೆ ಅಪಾರ ಹಾನಿ ಮಾಡುವ ಜತೆಗೆ, ಸಿಂಹಸ್ಪಪ್ನವಾಗಿ ಕಾಡಿದ್ದ. ಅಕ್ಷರಶಃ ಕ್ರಾಂತಿಕಾರಿ ಎನಿಸಿಕೊಂಡಿದ್ದ.
1824ರಲ್ಲಿ ನಡೆದ ಯುದ್ಧದಲ್ಲಿ ಬ್ರಿಟಿಷರಿಗೆ ಸೋಲುಣಿಸಿದ. ಈ ಸಂಗ್ರಾಮದಲ್ಲಿ ಬ್ರಿಟಿಷ್ ಅಧಿಕಾರಿ ಥ್ಯಾಕರೆ ಕೊಲ್ಲಲ್ಪಟ್ಟ. ಈ ಯುದ್ಧ ಪರಿಣಾಮ ಆರಂಭದಲ್ಲಿ ಕಿತ್ತೂರಿನಲ್ಲಿ ಸಂಭ್ರಮ ನೆಲೆಸಿತ್ತಾದರೂ, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಕ್ಕೆ ಸಂಬಂಧಿಸಿದ ಹಲವು ಮುನ್ಸೂಚನೆಗಳು ಸಿಕ್ಕಿದ್ದವು. ಈ ಸೋಲಿನಿಂದ ಮುಖಭಂಗಕ್ಕೊಳಗಾದ ಬ್ರಿಟಿಷರಲ್ಲಿ ಕಿತ್ತೂರಿನ ಬಗೆಗೆ ಅಸಮಾಧಾನ, ಆಕ್ರೋಶ ಹೆಚ್ಚಾಯಿತು. ಕಿತ್ತೂರಿನ ಸೇನೆಯನ್ನು ನೇರ ಸೋಲಿಸಲಾಗದು ಎಂಬುದನ್ನು ಮನಗಂಡ ಬ್ರಿಟಿಷರು, ಹತ್ತಾರು ಆಸೆ-ಆಮಿಷಗಳನ್ನು ತೋರಿಸಿ, ಕಿತ್ತೂರಿನ ಅರಮನೆಯ ಪ್ರಮುಖರನ್ನು ಬುಟ್ಟಿಗೆ ಬೀಳಿಸಿಕೊಂಡರು. ಮೋಸದಿಂದ ಚನ್ನಮ್ಮನನ್ನು ಬೆನ್ನಟ್ಟಿ ಬಂಧಿಸಿದರು. ಆದರೆ, ಆ ಸಂದರ್ಭದಲ್ಲಿ ರಾಯಣ್ಣ ಬ್ರಿಟಿಷರಿಂದ ತಪ್ಪಿಸಿಕೊಂಡಿದ್ದ.
ಬ್ರಿಟಿಷರ ವಿರುದ್ಧದ ಹೋರಾಟವನ್ನು ರಾಯಣ್ಣ ಮುಂದುವರಿಸಿದ. ಸಂಗ್ರಾಮದ ನೊಗ ಹೊತ್ತ ಚನ್ನಮ್ಮನ ಬಲಗೈ ಬಂಟನನ್ನು ಬಲೆಗೆ ಬೀಳಿಸಿಕೊಳ್ಳಲು ಬ್ರಿಟಿಷ್ ಸರ್ಕಾರ ಅವಶ್ಯವಿರುವ ಎಲ್ಲ ತಂತ್ರಗಳನ್ನು ರೂಪಿಸಿತ್ತು. ಆದರೆ, ಆರಂಭಿಕ ಹಂತದ ಯಾವ ಪ್ರಯತ್ನವೂ ಫಲಪ್ರದವಾಗಲಿಲ್ಲ. ಆಗ ಬ್ರಿಟಿಷರ ನೆರವಿಗೆ ಬಂದದ್ದು ರಾಯಣ್ಣನ ಮಾವ. ಸ್ವತಃ ಮಾವನಿಂದಲೇ ಮೋಸಕ್ಕೊಳಗಾದ ರಾಯಣ್ಣ ಬ್ರಿಟಿಷರ ಬಲೆಗೆ ಬಿದ್ದ. ಗಲ್ಲಿಗೇರಿಸುವ ಮೊದಲು, ‘ನಿನ್ನ ಕೊನೆ ಆಸೆ ಏನು’ ಎಂದು ಬ್ರಿಟಿಷರು ರಾಯಣ್ಣನನ್ನು ಕೇಳಿದ್ದರು. ಅದಕ್ಕೆ ರಾಯಣ್ಣನು, ‘ನಮ್ಮ ದೇಶದಲ್ಲಿ ಮನೆ, ಮನೆಗೊಬ್ಬರಂತೆ ಸಾವಿರಾರು ದೇಶಭಕ್ತರು ಹುಟ್ಟಿಬರುತ್ತಾರೆ. ನಿಮ್ಮನ್ನು ಈ ದೇಶದಿಂದ ಒದ್ದೋಡಿಸುತ್ತಾರೆ ನೋಡಿ’ ಎಂದು ಹೇಳಿ ಎಚ್ಚರಿಸಿದ್ದು ಈಗ ಇತಿಹಾಸ. 1831ರ ಜ.26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಆತನನ್ನು ಗಲ್ಲಿಗೇರಿಸಲಾಯಿತು ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ.
●ನಂದಗಡದ ಪ್ರಸ್ತುತ ಸ್ಥಿತಿಗತಿ:
ನಂದಗಡದಲ್ಲಿ ಆಲದ ಮರಕ್ಕೆ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಇಂದು ಐತಿಹಾಸಿಕ ಧಾರ್ವಿುಕ ಸ್ಥಳವಾಗಿ ಮಾರ್ಪಟ್ಟಿದ್ದು, ಜನರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆದರೆ, ಇಲ್ಲಿ ಅಂದುಕೊಂಡಷ್ಟು ಸೌಲಭ್ಯಗಳಿಲ್ಲ. ಅದರಂತೆ ಹುಟ್ಟೂರು ಸಂಗೊಳ್ಳಿ ಕೂಡ ನಿರ್ಲಕ್ಷ್ಯ್ಕೆ ಒಳಗಾಗಿದ್ದು, ಮೂಲಸೌಲಭ್ಯಗಳಿಲ್ಲದೇ ನರಳುತ್ತಿದೆ. ಇಲ್ಲಿ ಮೂಲಸೌಕರ್ಯ ಒದಗಿ ಸಿ, ಇದನ್ನೊಂದು ಪ್ರವಾಸಿ ಸ್ಥಳವನ್ನಾಗಿಸುವ ಕಡೆಗೆ ಸರ್ಕಾರ ಗಮನಹರಿಸಬೇಕಿದೆ.
●ಅಧ್ಯಯನಕ್ಕೆ ಅವಕಾಶ ಸಿಗಲಿ:
ಯಾವುದೇ ಸ್ವಾರ್ಥವಿಲ್ಲದೇ ದೇಶಕ್ಕಾಗಿ ಹೋರಾಟ ಮಾಡಿದ ಅಪ್ರತಿಮ ದೇಶಭಕ್ತ ರಾಯಣ್ಣ. ಬಡತನದಲ್ಲಿದ್ದರೂ ದೂರದೃಷ್ಟಿ, ಸಂಘಟನಾ ಚಾತುರ್ಯ, ನಾಡನಿಷ್ಠೆಯ ಮೂಲಕ ಬ್ರಿಟಿಷರ ಹುಟ್ಟಡಗಿಸಿದ್ದು ಮಹಾನ್ ಸಾಧನೆಯೇ ಸರಿ. ಅವರ ಇತಿಹಾಸವನ್ನು ಇಂದಿನ ಯುವಪೀಳಿಗೆ ಅಧ್ಯಯನ ಮಾಡುವುದು ಅವಶ್ಯ ಮತ್ತು ಅನಿವಾರ್ಯಎಂಬುದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ, ಸಾಹಿತಿ ರಂಗರಾಜ ವನದುರ್ಗ ಅವರ ಅಭಿಮತ.
ಬ್ರಿಟಿಷರ ಮೋಸದ ಬಲೆಗೆ ಸಿಲುಕಿ ಗಲ್ಲಿಗೇರಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೊಂದು ಗೌರವ ಸಲ್ಲಿಸುವುದಕ್ಕೆ ಈ ದಿನ ನಿಮಿತ್ತವಾಗಲಿ. ರಾಷ್ಟ್ರಹಿತ ಬಯಸಿದ ಅವರ ಜೀವನಾದರ್ಶ ಇಂದಿಗೂ ಪ್ರಸ್ತುತ.
●ಸಂಗೊಳ್ಳಿ ರಾಯಣ್ಣ ಒಬ್ಬ ಮಹಾನ್ ವ್ಯಕ್ತಿ. ಅವರ ಜನ್ಮದಿನವಾದ ಆ. 15ರಂದೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅವರು ಮರಣ ಹೊಂದಿದ ಜ. 26ರಂದೇ ದೇಶದ ಗಣರಾಜ್ಯೋತ್ಸವ. ಇವು ವಿಶೇಷ ದಿನಗಳಾಗಿವೆ. ಯಾರಿಗೆ ಅಂಥ ಪುಣ್ಯ ಸಿಗುತ್ತದೆ ಹೇಳಿ? ರಾಯಣ್ಣನಂಥ ವೀರ ಯೋಧನ ಜೀವನ ಚರಿತ್ರೆ ಆಧರಿಸಿದ ಸಿನಿಮಾದಲ್ಲಿ ನಟಿಸಿದ್ದೇನೆ ಎಂಬುದೇ ನನಗೆ ಹೆಮ್ಮೆ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು