ಶಿಕ್ಷಣವೇ ಶಕ್ತಿ

Wednesday, 27 December 2023

ಜಗಜ್ಯೋತಿ, ಕ್ರಾಂತಿಯೋಗಿ, ಭಕ್ತಿ ಭಂಡಾರಿ ಬಸವಣ್ಣನವರು.

ನಮ್ಮ ನಾಡು, ನಮ್ಮ ಹೆಮ್ಮೆ – ದಾರ್ಶನಿಕರು 

ಹಿಂದೆ ಕವಿಗಳಿಗೆ ರಾಜರು ಆಶ್ರಯ ನೀಡುತ್ತಿದ್ದರು.ಅದ್ದರಿಂದ ಕವಿಗಳು ಹೆಚ್ಚಾಗಿ ಆಶ್ರಯದಾತನಿಗೆ ಗೌರವ ಸೂಚಿಸುವ ಸಲುವಾಗಿ ತನ್ನ ಒಡೆಯನನ್ನು ಪುರಾಣದಲ್ಲಿ ಬರುವ ಮಹಾಪುರುಷರಿಗೆ ಹೋಲಿಕೆ ಮಾಡಿ  ಕೃತಿಗಳನ್ನು ರಚನೆ ಮಾಡುತ್ತಿದ್ದರು. ಅವರು ಸಮಾಜದಲ್ಲಿ ಇದ್ದ ಪದ್ಧತಿಗಳನ್ನು ವಿಡಂಬನೆ ಮಾಡದೇ ವ್ಯಕ್ತಿಯನ್ನುಆಧರಿಸುತ್ತಿದ್ದರು. ನಂತರ ಬಂದ ಕವಿಗಳು ಇದೇ ಸಂಸ್ಕೃತಿಯನ್ನು ಮುಂದುವರೆಸಿದರು. ಆದರೆ ಲೋಕದ ಡೊಂಕುಗಳನ್ನು ತಿದ್ದುವ ಕಾಯಕಕ್ಕೆ ಯಾರು ಮುಂದಾಗಲಿಲ್ಲ . ಕಡೆಗೆ ಮಹಾಪುರುಷನೊಬ್ಬ ಮೊದಲ ಬಾರಿಗೆ ಸಮಾಜವನ್ನು ತಿದ್ದುವ ಕೆಲಸವನ್ನು ಜನಸಾಮಾನ್ಯರಿಗೆ ಅರ್ಥವಾಗುವ ಆಡುಭಾಷೆಯಲ್ಲಿ ಪ್ರಯತ್ನ ಮಾಡಿದರು. ಅವರೇ ನಮ್ಮ  ಜಗಜ್ಯೋತಿ, ಕ್ರಾಂತಿಯೋಗಿ, ಭಕ್ತಿ ಭಂಡಾರಿ ಬಸವಣ್ಣನವರು.
ಜಗಜ್ಯೋತಿ ಬಸವೇಶ್ವರ
ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿ. ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಮಾದಲಾಂಬಿಕೆ ತನಗೆ ಗಂಡು ಮಗು ಬೇಕೆಂದು ಶಿವನಲ್ಲಿ ಬೇಡಿ ಕೊಳ್ಳುತ್ತಿದ್ದಳು. ಒಮ್ಮೆ ಧ್ಯಾನಿಸುವಾಗ ಶಿವನ ವಿಗ್ರಹದ  ಮೇಲಿದ್ದ ಮಲ್ಲಿಗೆ ಹೊವೊಂದು ಆಕೆಯ ಉಡಿಯಲ್ಲಿ ಬಿತ್ತು. ಅದನ್ನೇ ಭಕ್ತಿಯಿಂದ ಸ್ವೀಕರಿಸಿ  ಮುಡಿದುಕೊಂಡಳು. ಅಂದು ರಾತ್ರಿ ಅಕೆಗೆ   ಶಿವನು ಪ್ರತ್ಯಕ್ಷನಾಗಿ ತನ್ನ ನಂದಿಯನ್ನು ಭೂಲೋಕಕ್ಕೆ ಕಳುಹಿಸುವ ಮತ್ತು ನಂದಿಯು ಇವರ ಮನೆಯ ಮುಂದೆ ಪ್ರತ್ಯಕ್ಷವಾಗುವ ಕನಸು ಬೀಳುತ್ತದೆ. ಮಾರನೆಯ ದಿನ ಸುದ್ದಿಯನ್ನು  ತನ್ನ ಗುರುಗಳ  ಹತ್ತಿರ ಮಾದಲಾಂಬಿಕೆ ಸಂತೋಷದಿಂದ ಹಂಚಿಕೊಂಡಳು. ಗುರುಗಳು ನಿಮಗೆ ಒಬ್ಬ ಮಗ ಜನಿಸುತ್ತಾನೆ ಅವನು ಮುಂದೆ ಲೋಕ ಕಲ್ಯಾಣದಲ್ಲಿ ತೊಡಗುವನು ಎಂದು ಹೇಳುತ್ತಾರೆ.
ಸ್ವಲ್ಪ ಸಮಯದ ನಂತರ ಮಾದಲಾಂಬಿಕೆ ಗರ್ಭವತಿಯಾದಳು . ವೈಶಾಖ ಶುದ್ಧ ತದಿಗೆಯಂದು ಬಸವಣ್ಣನ ಜನನವಾಯಿತು. ಮಗು ಹುಟ್ಟಿದಾಗ ದಿವ್ಯ ತೇಜಸ್ಸಿನಿಂದ ಮಹಾನ್ ಯೋಗಿಯ ಹಾಗೆ ಮೌನದಿಂದ ಇರುತ್ತಿತ್ತು. ಮಗು ಅಳದೆ ,ಸದ್ದು ಮಾಡದೇ ಇರುವುದನ್ನು ಕಂಡ ಪೋಷಕರು ಕೊಡಲ ಸಂಗಮದಲ್ಲಿ ಇರುವ ಗುರುಗಳಿಗೆ ತಿಳಿಸಿದರು. ವಿಷಯ ತಿಳಿದು ಬಾಗೇವಾಡಿಗೆ ಬಂದ ಗುರುಗಳು ಮಗುವಿನ ಹಣೆಯ ಮೇಲೆ ವಿಭೂತಿ ಹಚ್ಚಿದರು. ಅಗ ಮಗು ಕಣ್ಣು ತೆರೆಯಿತು. ಕೊರಳಿಗೆ ಲಿಂಗ ಕಟ್ಟಿದಾಗ ಮಗು ನಗ ತೊಡಗಿತು. ಆಗ ಗುರುಗಳು ಶಿವನ ಕೃಪೆಯಿಂದ ನಂದಿಯೇ ನಿಮ್ಮ ಮಗನಾಗಿ ಜನಿಸಿದ್ದಾನೆ ಅದ್ದರಿಂದ ಬಸವ ಎಂದು ನಾಮಕರಣ ಮಾಡಿ ಎಂದು ಸೂಚಿಸಿದರು. ಮುಂದೆ ಬಸವೇಶ್ವರರಾದರು. ಜನರು ಪ್ರೀತಿಯಿಂದ ಬಸವಣ್ಣ ಎಂದು ಕರೆಯತೊಡಗಿದರು.
ಬಾಲಕ ಬಸವಣ್ಣ ಸಮಾಜದ ಹಲವು ಪದ್ದತಿಗಳ ಬಗ್ಗೆ ಹಾಗೇಕೆ? ಹೀಗೇಕೆ ? ಎಂದು ಪ್ರಶ್ನೆ ಮಾಡುತ್ತಿದ್ದರು. ಅವರು ಬಾಲಕನಾಗಿದ್ದಾಗ ವಿಚಾರಿಸುವ ಪರಿಯನ್ನು ನೋಡಿದವರಿಗೆ ಉತ್ತರ ನೀಡುವುದು ಕಷ್ಟವಾಗುತ್ತಿತ್ತು. ಬಸವಣ್ಣನಿಗೆ  ಎಲ್ಲರೂ ಸಮಾನರು,ಎಲ್ಲರೂ ದುಡಿಯಬೇಕು, ಭಕ್ತಿಯಿಂದ ಇರಬೇಕು ಎಂದು ಬಾಲ್ಯದಲ್ಲಿಯೇ ಮೂಡಿಬಂದವು. ಎಂಟು ವರ್ಷ ತುಂಬಿದಾಗ ಮನೆಯ ಸಂಪ್ರದಾಯದಂತೆ ಬಸವಣ್ಣನಿಗೆ ಉಪನಯನ ಮಾಡಬೇಕೆಂದು ಪೋಷಕರು ನಿರ್ಧರಿಸಿದರು. ಆಗ ಉಪನಯನವನ್ನು ಪ್ರಶ್ನಿಸಿದ ಬಸವಣ್ಣ ತನಗೆ ಏಕೆ ಬೇಕು. ಆಗಲೇ ಗುರುಗಳು ನನಗೆ ಲಿಂಗವನ್ನು ಕಟ್ಟಿದ್ದರಲ್ಲಾ ಮತ್ತೊಂದು ಯಾಕೆ ಎಂದು ಪ್ರಶ್ನೆ ಹಾಕಿದರು. ಕಡೆಗೆ ಪೋಷಕರು ಬಸವಣ್ಣನ ಮನವೊಲಿಸಲು ಎಲ್ಲ ಪ್ರಯತ್ನ ಮಾಡಿದರು ಎಲ್ಲವೂ ಬಸವಣ್ಣನ ಮುಂದೆ ವಿಫಲವಾಯಿತು. ಕಡೆಗೆ ಬಸವಣ್ಣ ಮನೆಯನ್ನು ತೊರೆದು ಕೊಡಲಸಂಗಮದಲ್ಲಿರುವ ಸಂಗಮೇಶ್ವರ ಗುರುಗಳ  ಆಶ್ರಮಕ್ಕೆ ಬಂದರು. ಅಲ್ಲೇ ವಿದ್ಯಾಬ್ಯಾಸ ಮುಂದುವರೆಸಿದರು.
 ಒಮ್ಮೆ ಸಂಗಮೇಶ್ವರರ ಆಶ್ರಮಕ್ಕೆ ಕಲ್ಯಾಣದ ಚಾಲುಕ್ಯರ ರಾಜ ಬಿಜ್ಜಳನ  ಮಂತ್ರಿಯಾದ ಬಲದೇವನು ಭೇಟಿ ನೀಡಿದಾಗ ಬಸವಣ್ಣ ಬಗ್ಗೆ ಸಂಗಮೇಶ್ವರರು ಕೊಂಡಾಡಿದರು. ಮಂತ್ರಿಯು ಇಂತಹ ಅರ್ಹರು ನಮ್ಮ ರಾಜ್ಯಕ್ಕೆ ಬೇಕು ಎಂದು ಅರಿತು ಹಾಗು ತನ್ನ ಮಗಳಿಗೆ ಬಸವಣ್ಣ ಯೋಗ್ಯ ವರನೆಂದು ಗುರುಗಳ ಮುಂದೆ ವಿಚಾರವನ್ನು ಪ್ರಸ್ತಾಪಿಸಿದನು. ಗುರುಗಳಿಗೆ ಸಹ ಇದು ಸರಿಯೆನಿಸಿತು. ಕಡೆಗೆ ಗುರುಗಳು ಬಸವಣ್ಣನನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಕೊಡಲ ಸಂಗಮದಿಂದ ಕಲ್ಯಾಣ ನಗರಕ್ಕೆ ಆಗಮಿಸಿದ ಬಸವಣ್ಣ ಮೊದಲು ಕೋಶಾಧಿಕಾರಿಯಾಗಿ ರಾಜ್ಯದ ಭಂಡಾರದ ವ್ಯವಸ್ತೆಯನ್ನು ಸರಿಪಡಿಸಿದರು. ಒಮ್ಮೆ ಅರಮನೆಯಲ್ಲಿ ಒಂದು ತಾಮ್ರಪಟವು ಸಿಕ್ಕಿತು. ಅದನ್ನು ಓದಲು ಅಲ್ಲಿದ್ದ ಯಾರಿಗೂ ಬರಲಿಲ್ಲ ಅಗ ಬಸವಣ್ಣ ಅದನ್ನು ಓದಿ  ಅರ್ಥವನ್ನು ತಿಳಿಸಿದರು. ಇದರಿಂದ ಹಿಂದಿನ ರಾಜರು ಸುರಕ್ಷಿತವಾಗಿ ಇಟ್ಟಿದ್ದ ಅಪಾರ ನಿಧಿಯು ಪತ್ತೆಯಾಯಿತು.ನಿಧಿಯನ್ನು ಸಮಾಜದ ಒಳಿತಿಗೆ ಬಳಸುವ ಮಾರ್ಗವನ್ನು ಬಸವಣ್ಣ ನೀಡಿದರು . ಇವರ ಬುದ್ದಿಶಕ್ತಿಗೆ ಮೆಚ್ಚಿ ಬಿಜ್ಜಳನು ಬಸವಣ್ಣನನ್ನು ಭಂಡಾರದ ಮುಖ್ಯಸ್ತನನ್ನಾಗಿ ಮಾಡಿದನು.
ಬಿಜ್ಜಳನ  ಸಾಕು ತಂಗಿ ನೀಲಾಂಬಿಕೆ ಮತ್ತು ಬಲದೇವನ ಮಗಳಾದ ಗಂಗಾಂಬಿಕೆಯ ಜೊತೆ ಬಸವಣ್ಣನ ಮದುವೆಯಾಯಿತು. ಬಸವಣ್ಣ ಅನುಭವ ಮಂಟಪವನ್ನು ಸ್ಥಾಪಿಸಿದರು. ಅಲ್ಲಿ ಭಕ್ತಿಯೇ ಪ್ರಧಾನವಾಗಿತ್ತು. ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎನ್ನುವ ತತ್ವವನ್ನು ಸಾರಿದರು. ಅನುಭವ ಮಂಟಪದಲ್ಲಿ ಕಾಯಕವೇ ಕೈಲಾಸ ಎಂದು ಎಲ್ಲರು ದುಡಿಮೆಯಲ್ಲಿ ತೊಡಗಿ , ಜಾತಿ ಭೇದವಿಲ್ಲದೆ ನಡೆದು ಕೊಳ್ಳುತ್ತಿದ್ದರು. ಬಲದೇವನ ಮರಣದ ನಂತರ ಬಿಜ್ಜಳನು ಬಸವಣ್ಣನನ್ನು ಮಂತ್ರಿಯನ್ನಾಗಿ ಮಾಡಿದ ಬಸವಣ್ಣನವರ ಕಾರ್ಯ ಕ್ಷೇತ್ರ ಇನ್ನೂ ವಿಸ್ತಾರವಾಯಿತು. ದುಡಿಯುವವರಿಗೆ ಜಾತಿ ಇಲ್ಲ , ಎಲ್ಲರೂ ಸಮಾನರು ಎಂದು ಸಾರಿದರು. ಇವರ ವಿಚಾರವನ್ನು ಒಪ್ಪಿಕೊಳ್ಳಲು ಸಂಪ್ರದಾಯವಾದಿಗಳು ಸಿದ್ದಲಿರಲಿಲ್ಲ ಯಾವಾಗಲು ವಿರೋಧಿಸುತ್ತಿದ್ದರು . ಹೀಗಿರುವಾಗ ಬಸವಣ್ಣನವರು ಮಧುವರಸ ಮತ್ತು ಸಮಗಾರ ಹರಳಯ್ಯನವರಿಗೆ ಲಿಂಗಧಾರಣೆ ಮಾಡಿಸಿದರು. ಹರಳಯ್ಯನ ಮಗ ಮಧುವರಸನ ಮಗಳನ್ನು ಮದುವೆಯಾದನು. ಇದರಿಂದ ಬಸವಣ್ಣನ ವಿರೋಧಿಗಳು ಕೆಂಡ ಮಂಡಲರಾದರು. ಬಿಜ್ಜಳನ ಕಿವಿ ಚುಚ್ಚಿ ಹರಳಯ್ಯ ಮತ್ತು ಮಧುವರಸರಿಗೆ ಕ್ರೋರ ಶಿಕ್ಷೆಯಲ್ಲಿ ವಿಧಿಸುವಲ್ಲಿ ಯಶಸ್ವಿಯಾದರು. ಇದರಿಂದ ನೊಂದ ಬಸವಣ್ಣ ಕಲ್ಯಾಣವನ್ನು ಬಿಟ್ಟು ಕೊಡಲ ಸಂಗಮದಲ್ಲಿ ತನ್ನ ಆರಾಧ್ಯ ದೈವ ಕೊಡಲ ಸಂಗಮನಲ್ಲಿ ಐಕ್ಯರಾದರು.  
ಬಸವಣ್ಣನವರ ಆಯ್ದ ವಚನಗಳು 

ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?

ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!

ಎನ್ನ ನಡೆಯೊಂದು ಪರಿ |
ಎನ್ನ ನುಡಿಯೊಂದು ಪರಿ |
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ |
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |

ಎನಗಿಂತ ಕಿರಿಯರಿಲ್ಲ!
ಶಿವಭಕ್ತರಿಗಿಂತ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ!
ಕೂಡಲಸಂಗಮದೇವಾ ಎನಗಿದೇ ದಿಬ್ಯ.

ತಂದೆ ನೀನು, ತಾಯಿ ನೀನು;
ಬಂಧು ನೀನು ಬಳಗ ನೀನು;
ನೀನಲ್ಲದೆ ಮತ್ತಾರು ಇಲ್ಲವಯ್ಯ!
ಕೂಡಲಸಂಗಮದೇವ,
ಹಾಲಲದ್ದು ನೀರಲದ್ದು.

ವಚನದಲ್ಲಿ ನಾಮಾಮೃತ ತುಂಬಿ.
ನಯನದಲ್ಲಿ ನಿಮ್ಮ ಮೂರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ;
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ;
ಕೂಡಲಸಂಗಮದೇವ,
ನಿಮ್ಮ ಚರಣಕಮಲದೊಳಗಾನು ತುಂಬಿ!

ಎನ್ನ ವಾಮ-ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ
ಎನ್ನ ಮಾನಾಪಮಾನವು ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ ? ಕೂಡಲಸಂಗಮದೇವ.

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.

ಕರಿಯಂಜುವುದು ಅಂಕುಶಕ್ಕಯ್ಯ!
ಗಿರಿಯಂಜುವುದು ಕುಲಿಶಕ್ಕಯ್ಯ!
ತಮಂಧವಂಜುವುದು ಜ್ಯೋತಿಗಯ್ಯ!
ಕಾನನವಂಜುವುದು ಬೇಗೆಗಯ್ಯ!
ಪಂಚಮಹಾಪಾತಕವಂಜುವುದು
ನಮ್ಮ ಕೂಡಲಸಂಗನ ನಾಮಕ್ಕಯ್ಯ!

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲಸಂಗಮದೇವ.

ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ.

ಹಾವು ತಿಂದವರ ನುಡಿಸ ಬಹುದು!
ಗರ ಹೊಡೆದವರ ನುಡಿಸ ಬಹುದು!
ಸಿರಿಗರ ಹೊಡೆದವರ ನುಡಿಸ ಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.

ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನು ?
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು.

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ.
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ
ಕೂಡಲಸಂಗಮದೇವ.

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು;
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ.
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.

ಕಳಬೇಡ ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯ ಬೇಡ,
ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ!
ಇದೇ ಬಹಿರಂಗಶುದ್ಧಿ!
ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ.

ದಯವಿಲ್ಲದ ಧರ್ಮವದೇವುದಯ್ಯ,
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ.
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ.

ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ!
ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ!
ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಕೂಡಲಸಂಗಮದೇವ.

ನಾನೊಂದ ನೆನೆದರೆ, ತಾನೊಂದ ನೆನೆವುದು;
ನಾನಿತ್ತಲೆಳೆದರೆ, ತಾನತ್ತಲೆಳೆವುದು;
ತಾ ಬೇರೆ ಎನ್ನನಳಲಿಸಿ ಕಾಡಿತ್ತು;
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು;
ಕೂಡಲಸಂಗನ ಕೂಡಿಹೆನೆಂದರೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ.
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?

ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು.
ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು
ಕಿಚ್ಚಿನೊಳಿಕ್ಕುವೆನು.

ಕಾಯವಿಕಾರ ಕಾಡಿಹುದಯ್ಯ!
ಮನೋವಿಕಾರ ಕೂಡಿಹುದಯ್ಯ!
ಇಂದ್ರಿಯವಿಕಾರ ಸುಳಿದಿಹುದಯ್ಯ!
ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ!
ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ!
ಅನುಪಮಸುಖ ಸಾರಾಯ ಶರಣರಲ್ಲಿ,
ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?

ವಿಷಯವೆಂಬ ಹಸುರನೆನ್ನ ಮುಂದೆ ತಂದು
ಪಸರಿಸಿದೆಯಯ್ಯ;
ಪಶುವೇನ ಬಲ್ಲುದು ಹಸುರೆಂದೆಳಸುವುದು
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ
ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯ
ಕೂಡಲಸಂಗಮದೇವ.

ನೀರ ಕಂಡಲ್ಲಿ ಮುಳುಗುವರಯ್ಯ!
ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ.

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು