ವಾತಾವರಣದ (ವಾಯುಗೋಳ)ದ ಸಂಯೋಜನೆ ಮತ್ತು ಅದರ ಪ್ರಮುಖ 5 ಪದರುಗಳು
(The five layers of Atmosphere and its main features)

ಪರಿಸರ ವ್ಯವಸ್ಥೆ,
(Ecology, Environmental Studies)

ಭೂಗೋಳಶಾಸ್ತ್ರ
(Geography)

• ವಾಯುಗೋಳವು ವಿವಿಧ ಬಗೆಯ ಅನಿಲಗಳು, ಧೂಳಿನ ಕಣಗಳು ಮತ್ತು ನೀರಾವಿಯ ಮಿಶ್ರಣವಾಗಿದೆ.

• ವಾಯುಗೋಳದ ಮುಖ್ಯ ಅನಿಲಗಳೆಂದರೆ
- ಸಾರಜನಕ ಶೇ.78.08,
- ಆಮ್ಲಜನಕ ಶೇ.20.94,
- ಆರ್ಗಾನ್ ಶೇ.0.93,
- ಇಂಗಾಲದ ಡೈಆಕ್ಸೈಡ್ ಶೇ.03, ಮತ್ತು ಓಜೋನ್ ಶೇ. 0.000005.

• ವಾಯುಗೋಳವು ಧೂಳಿನ ಕಣಗಳನ್ನು ಸಹ ಒಳಗೊಂಡಿದ್ದು, ನೀರಿನ ಕಣಗಳ ನಿರ್ಮಾಣಕ್ಕೆ ಸಹಾಯಕವಾಗಿದೆ.
ವಾಯುಗೋಳದಲ್ಲಿರುವ ನೀರಾವಿಯು ಮೋಡದ ನಿರ್ಮಾಣ ಹಾಗೂ ವೃಷ್ಟಿಗೆ ಕಾರಣವಾಗುವುದಲ್ಲದೆ, ವಾಯುಗೋಳದ ಶಾಖ ಮತ್ತು ಶಕ್ತಿಯನ್ನು ಹಿಡಿದಿರಿಸಿಕೊಂಡು ಅದು ಒಂದು ಸ್ಥಳದ ಹವಾಮಾನದ ಪರಿಸ್ಥಿತಿಯ ಮೇಲೆ ಪ್ರಭಾವವನ್ನು ಬೀರುವುದು.

•► ವಾಯುಗೋಳದ ರಚನೆ :


ವಾಯುಗೋಳವನ್ನು ಅದರ ಹಲವಾರು ಲಕ್ಷಣಗಳನ್ನು ಆಧರಿಸಿ ಐದು ಪದರುಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ ;
- ಪರಿವರ್ತನಾಮಂಡಲ,
- ಸಮೋಷ್ಣಮಂಡಲ,
- ಮಧ್ಯಂತರಮಂಡಲ,
- ಉಷ್ಣತಾಮಂಡಲ ಮತ್ತು ಬಾಹ್ಯಮಂಡಲ.

► ಪರಿವರ್ತನಾಮಂಡಲ (Troposphere ) : 


- ಇದು ವಾಯುಗೋಳದ ಅತ್ಯಂತ ಕೆಳಪದರ.
- ಇದು ಸಮಭಾಜಕವೃತ್ತದ ಬಳಿ 18 ಕಿ.ಮೀ. ಎತ್ತರದವರೆಗೆ ಹಾಗೂ ಧ್ರುವಪ್ರದೇಶದ ಬಳಿ 8ಕಿ.ಮೀ. ಎತ್ತರದ ವರೆಗೆ ಕಂಡುಬರುವುದು.
- ಈ ವಲಯದಲ್ಲಿಯೇ ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ಮೋಡ, ಮಳೆ ಮೊದಲಾದ ಎಲ್ಲಾ ಅಂಶಗಳು ಕಂಡುಬರುತ್ತವೆ.
- ಹವಾಮಾನದ ಎಲ್ಲಾ ಬದಲಾವಣೆ ಕಂಡುಬರುವುದು ಈ ವಲಯದಲ್ಲಿ ಮಾತ್ರ.
- ಈ ವಲಯದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗುತ್ತವೆ.

•► ಸಮೋಷ್ಣಮಂಡಲ (Stratosphere) : 


- ಇದು ವಾಯುಮಂಡಲದ ಎರಡನೆಯ ಪದರವಾಗಿದ್ದು 50 ಕಿ.ಮೀ.ವರೆಗೆ ಹಬ್ಬಿದೆ.
- ಪರಿವರ್ತನಾ ಮಂಡಲ ಮತ್ತು ಮಧ್ಯಂತರ ಮಂಡಲಗಳ ನಡುವೆ ವಿಸ್ತರಿಸಿದೆ.
- ಈ ಪದರದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದುದು.
- ಇದು ಸೂರ್ಯನಿಂದ ಬರುವ ಅತಿನೇರಳೆ (ಅಲ್ಟ್ರಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ.
- ಈ ಪದರವು ಮೋಡ ಹಾಗೂ ಇತರೆ ಎಲ್ಲಾ ಬಗೆಯ ಹವಾಮಾನದ ಅಂಶಗಳಿಂದ ಮುಕ್ತವಾಗಿರುವುದು.
- ಇದರಿಂದ ಈ ಪದರದಲ್ಲಿ ಜೆಟ್ ವಿಮಾನಗಳು ಹಾರಾಡಲು ಸೂಕ್ತವಾಗಿದೆ.

► ಮಧ್ಯಂತರ ಮಂಡಲ (Mesosphere ) : 


- ಇದು ಸಮೋಷ್ಣಮಂಡಲದ ಮೇಲಿದ್ದು ಸುಮಾರು 80 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ.
- ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು.
- ಈ ಪದರು ವಾಯುಮಂಡಲದ ಅತಿ ಶೀತವಾದ ವಲಯವಾಗಿದೆ.

► ಉಷ್ಣತಾಮಂಡಲ (Thermosphere) : 


- ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ.
- ಈ ಪದರದಲ್ಲಿ ಉಷ್ಣಾಂಶವು ತೀವ್ರವಾಗಿ ಹೆಚ್ಚಾಗುತ್ತದೆ.
- ಈ ಪದರದಲ್ಲಿನ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು ‘ಆಯಾನುಮಂಡಲ’ವೆಂತಲೂ ಕರೆಯುವರು.
- ಇಲ್ಲಿನ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ರೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.

► ಬಾಹ್ಯಮಂಡಲ (Exosphere) : 


- ಬಾಹ್ಯಮಂಡಲವು ವಾಯುಗೋಳದ ಅತ್ಯಂತ ಎತ್ತರದಲ್ಲಿದ್ದು ಪದರವಾಗಿದೆ.
- ಈ ಪದರಲ್ಲಿ ವಾಯುಗೋಳದ ಘಟಕಾಂಶಗಳು ವಿರಳವಾಗಿರುತ್ತದೆ ಮತ್ತು ಒತ್ತಡ ಅತ್ಯಂತ ಕಡಿಮೆ ಇರುತ್ತದೆ.